Jagdalpur (Chhattisgarh): ಅಕ್ಟೋಬರ್ 17 ನಕ್ಸಲ್ ಶರಣಾಗತಿಯಲ್ಲಿ ಒಂದು ಐತಿಹಾಸಿಕ ದಿನ. ಬಸ್ತಾರದ ನಕ್ಸಲ್ ಪ್ರದೇಶದಲ್ಲಿ ಒಂದೇ ದಿನ 200ಕ್ಕೂ ಹೆಚ್ಚು ನಕ್ಸಲರು ಶಸ್ತ್ರಾಸ್ತ್ರವನ್ನು ಬಿಟ್ಟು ಮುಖ್ಯವಾಹಿನಿಗೆ ಸೇರಿದ್ದಾರೆ.
ಜಗದಲ್ಪುರ ಪೊಲೀಸ್ ಲೈನ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 208 ಮಾವೋಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಮುಖ್ಯವಾಹಿನಿಗೆ ಬರುವ ಇಚ್ಛೆಯನ್ನು PM ನರೇಂದ್ರ ಮೋದಿ ಹಾಗೂ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಅವರ ಮುಂದೆ ವ್ಯಕ್ತಪಡಿಸಿದರು.
ಶರಣಾದ ಪ್ರಮುಖರು: ಕೇಂದ್ರ ಸಮಿತಿ ಸದಸ್ಯ ವಾಸುದೇವ್ ರಾವ್ (ಸತೀಶ್/ರೂಪೇಶ್/ವಿಕಲ್ಪ್), ದಂಡಕಾರಣ್ಯ ವಿಶೇಷ ವಲಯ ಸಮಿತಿ ಸದಸ್ಯರಾದ ರಾಣಿತಾ ಮತ್ತು ಸಂತು, ಹಾಗೂ 20ಕ್ಕೂ ಹೆಚ್ಚು ವಿಭಾಗೀಯ ಸಮಿತಿ ಸದಸ್ಯರು, 30ಕ್ಕೂ ಹೆಚ್ಚು ಪ್ರದೇಶ ಸಮಿತಿ ಸದಸ್ಯರು ಮತ್ತು ಇತರ ಕೇಡರ್ ಮಾವೋಗಳು ಶರಣಾಗಿದ್ದಾರೆ.
ಉತ್ತರ ಬಸ್ತರ್ ನಲ್ಲಿ ನಕ್ಸಲ್ ಹೋರಾಟ ಕೊನೆಗೊಳ್ಳುತ್ತಿದ್ದು, ಈಗ ದಕ್ಷಿಣ ಬಸ್ತರ್ನಲ್ಲಿ ಮಾತ್ರ ಹೋರಾಟಗಾರರು ಉಳಿದಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಶರಣಾದ ಮಾವೋಗಳು ನಾಲ್ಕು ಬಸ್ಸುಗಳಲ್ಲಿ ತಂಡವಾಗಿ ಆಗಮಿಸಿ, ಎಲ್ಲಾ ಶಸ್ತ್ರಾಸ್ತ್ರಗಳನ್ನು ಪೊಲೀಸರ ಮುಂದೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಪಾಲ್ಗೊಂಡು ಇದನ್ನು ದೇಶಕ್ಕೆ ಐತಿಹಾಸಿಕ ದಿನ ಎಂದು ಘೋಷಿಸಿದರು.
ಶರಣಾದ ಮಾವೋಗಳು ಎಕೆ 47 ರೈಫಲ್ ಗಳು, 17 ಎಸ್ಎಲ್ಆರ್, 23 ಐಎನ್ಎಸ್ಎಎಸ್, 1 ಐಎನ್ಎಸ್ಎಎಸ್ ಎಲ್ಎಂಜಿ, 36 .303 ರೈಫಲ್ಗಳು, 4 ಕಾರ್ಬೈನ್ಗಳು, 11 ಬಿಜಿಎಲ್ ಲಾಂಚರ್, 41 12 ಬೋರ್/ಸಿಂಗಲ್ ಶಾಟ್, 1 ಪಿಸ್ತೂಲ್ ಸೇರಿದಂತೆ ಎಲ್ಲಾ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದರು.
ಇನ್ನೂ ಕೆಲವು ಮಾವೋಗಳು ಮುಖ್ಯವಾಹಿನಿಗೆ ಸೇರುವ ನಿರ್ಧಾರ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಶ್ಲಾಘನೆಯೊಂದಿಗೆ, 2026ರ ಮಾರ್ಚ್ ವೇಳೆಗೆ ನಕ್ಸಲಿಸಂ ಸಂಪೂರ್ಣ ನಿರ್ಮೂಲನೆ ಮಾಡುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಲಾಗಿದೆ.
ಕಳೆದ ಎರಡು ದಿನಗಳಲ್ಲಿ 258 ಎಡಪಂಥೀಯ ಉಗ್ರಗಾಮಿಗಳು ಹಿಂಸಾಚಾರವನ್ನು ತ್ಯಜಿಸಿ, ಭಾರತದ ಸಂವಿಧಾನಕ್ಕೆ ನಂಬಿಕೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಿರಂತರ ಪ್ರಯತ್ನಗಳಿಂದ ನಕ್ಸಲಿಸಂ ಕೊನೆಗೆ ತಲುಪುತ್ತಿದೆ ಎಂಬುದು ಇದರ ಸಾಕ್ಷ್ಯವಾಗಿದೆ.







