Ankola,Uttara Kannada: ಶೇಡಿಕುಳ್ಳಿ ಸಮುದ್ರತೀರದಲ್ಲಿ ಮಂಗಳವಾರ ಬೆಳಿಗ್ಗೆ ಬೃಹತ್ ತಿಮಿಂಗಿಲವೊಂದರ ಕಳೇಬರ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿರುವ ಈ ತಿಮಿಂಗಿಲ (whale) ಸುಮಾರು ಒಂದು ವಾರದ ಹಿಂದೆ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ತಿಮಿಂಗಿಲದ ಕಳೇಬರವನ್ನು ಕಂಡ ಸ್ಥಳೀಯ ಮೀನುಗಾರರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ತಿಮಿಂಗಿಲ, ಡಾಲ್ಫಿನ್‌ಗಳಂತಹ ಕಡಲಜೀವಿಗಳ ಕಳೇಬರಗಳು ಆಗಾಗ ಪತ್ತೆಯಾಗುತ್ತಿದೆ.
- 2023ರ ಮಾರ್ಚ್‌ನಲ್ಲಿ ಅಲಗೇರಿಯಲ್ಲಿ 40 ಅಡಿ ಉದ್ದದ ತಿಮಿಂಗಿಲ ಸತ್ತಿರುವುದು
- ಗೋಕರ್ಣದ ಕಡಲತೀರದಲ್ಲಿ 25 ಅಡಿ ಉದ್ದದ ತಿಮಿಂಗಿಲ ಪತ್ತೆ
- ಡಾಲ್ಫಿನ್ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಬಲೆಯ ತುಂಡುಗಳು ಕಂಡುಬಂದ ಘಟನೆ
ಡಾಲ್ಫಿನ್ ಸಾವಿಗೆ ಪ್ಲಾಸ್ಟಿಕ್ ಸೇವನೆ ಮುಖ್ಯ ಕಾರಣವೆಂದು ಅರಣ್ಯಾಧಿಕಾರಿ ಕೆ.ಡಿ. ನಾಯ್ಕ್ ತಿಳಿಸಿದ್ದಾರೆ. “ಪ್ಲಾಸ್ಟಿಕ್ ಬಳಕೆ ವಿರೋಧಿಸಿ ಜನರಲ್ಲಿ ಜಾಗೃತಿ ಮೂಡಬೇಕು,” ಎಂದಿದ್ದಾರೆ.
ಈ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಕಡಲ ಮಾಲಿನ್ಯ, ಹವಾಮಾನ ಬದಲಾವಣೆ, ಮೀನುಗಾರಿಕೆ ಚಟುವಟಿಕೆಗಳು ಇವು ಕಡಲಜೀವಿಗಳ ಸಾವಿಗೆ ಕಾರಣವಾಗಿದೆಯೇ ಎಂಬ ಬಗ್ಗೆ ತಜ್ಞರಿಂದ ಸಮಗ್ರ ಅಧ್ಯಯನ ನಡೆಸಬೇಕು ಎಂಬುದು ಮೀನುಗಾರರು ಮತ್ತು ಸಾರ್ವಜನಿಕರ ಆಗ್ರಹವಾಗಿದೆ.