ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಹ್ಯುಂಡೈ ಮೋಟರ್ ಇಂಡಿಯಾ (Hyundai Motor India) IPO ಹೂಡಿಕೆದಾರರಿಗೆ ನಿರಾಸೆ ಮಾಡಿದೆ. ಹ್ಯುಂಡೈ ಮೋಟರ್ ಇಂಡಿಯಾ (Hyundai Motor India) ಷೇರುಗಳು ಮಾರುಕಟ್ಟೆ ಪ್ರವೇಶಿಸಿದ್ದು, 1.5% ರಿಯಾಯಿತಿಯಲ್ಲಿ ಲಿಸ್ಟಿಂಗ್ (listing) ಆಗಿದೆ.
1,960 ರೂಪಾಯಿ ಮುಖಬೆಲೆ ಹೊಂದಿದ್ದ ಷೇರುಗಳು ಮೊದಲ ದಿನ BSCಯಲ್ಲಿ ರೂ 1,931 ಮತ್ತು NSC ಯಲ್ಲಿ ರೂ 1,934 ಗೆ ಪ್ರಾರಂಭವಾಯಿತು.
ಷೇರು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಕಂಪನಿಯ ಮೌಲ್ಯಮಾಪನದ ಬಗ್ಗೆ ಇದ್ದ ಕಳವಳಗಳು ಐಪಿಒ ಮೇಲೆ ಪರಿಣಾಮ ಬೀರಿದೆ. ಗ್ರೇ (GMP) ಮಾರ್ಕೆಟ್‌ನಲ್ಲಿ ನೀಡಿದ್ದ ಪ್ರೀಮಿಯಂ ಮೊತ್ತಕ್ಕಿಂತ ಕಡಿಮೆ ಬೆಲೆಗೆ ಷೇರುಗಳು ಲಿಸ್ಟಿಂಗ್ ಆಗಿದೆ.
ಹ್ಯುಂಡೈ ಭಾರತದಲ್ಲಿ ಪ್ರಮುಖ ಕಾರು ಮಾರಾಟಗಾರ ಎನಿಸಿಕೊಂಡರೂ, ಎಲೆಕ್ಟ್ರೆಕ್ ವಾಹನಗಳ ತಯಾರಿಕೆಯಲ್ಲಿ ಹ್ಯುಂಡೈ ಹೆಚ್ಚು ಪಾಲನ್ನು ಹೊಂದದೇ ಇರುವುದು ಕೂಡ ಭವಿಷ್ಯದ ಕಂಪನಿ ಬೆಳವಣಿಗೆ ದೃಷ್ಟಿಯಿಂದ ಹೂಡಿಕೆದಾರರು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಭಾರತದಲ್ಲಿ ಇವಿ ಕಾರುಗಳ ಉತ್ಪಾದನೆಯಲ್ಲಿ ಟಾಟಾ ಮೋಟಾರ್ಸ್ (Tata Motors) ಮುಂಚೂಣಿಯಲ್ಲಿದೆ.
ಲಿಸ್ಟಿಂಗ್ ಆದ ಮೊದಲ ದಿನವೇ ಹೂಡಿಕೆದಾರರಿಗೆ ನಿರಾಸೆ ಮೂಡಿಸಿದರೂ, ದೀರ್ಘಾವಧಿ ಹೂಡಿಕೆದಾರರು ಷೇರುಗಳಿಂದ ಉತ್ತಮ ರಿಟರ್ನ್ಸ್ ನಿರೀಕ್ಷೆ ಮಾಡಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.