Bengaluru: ಅಕ್ರಮ ಬೆಟ್ಟಿಂಗ್ ಆರೋಪ ಪ್ರಕರಣದಲ್ಲಿ (Illegal betting case) ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಅವರ ಆಪ್ತ ಹಾಗೂ ವಕೀಲ ಎಚ್. ಅನಿಲ್ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ನೀಡಿದ್ದ ಸಮನ್ಸ್‌ಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಅನಿಲ್ ಗೌಡ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಕೋರ್ಟ್ ಸೂಚಿಸಿದೆ.
ಅನಿಲ್ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ಪೀಠ ಈ ಆದೇಶ ನೀಡಿದೆ. ವಕೀಲರಿಗೆ ಸಮನ್ಸ್ ನೀಡುವ ವಿಷಯ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವುದರಿಂದ, ಅದೇ ನಿರ್ಧಾರವಾಗುವವರೆಗೆ ಇ.ಡಿ. ಕ್ರಮ ಕೈಗೊಳ್ಳಬಾರದು ಎಂದು ಕೋರ್ಟ್ ಹೇಳಿದೆ.
ಹಿರಿಯ ವಕೀಲರು ವಾದಿಸುತ್ತಾ, ಅನಿಲ್ ಗೌಡ ವೃತ್ತಿಯಲ್ಲಿ ವಕೀಲರಾಗಿದ್ದು, ಕೇವಲ ಕಾನೂನು ಸಲಹೆ ನೀಡಿರುವುದರ ಹೊರತಾಗಿ ವೀರೇಂದ್ರ ಅವರ ಕಂಪನಿಯ ದಿನನಿತ್ಯದ ವ್ಯವಹಾರಗಳಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದರು. ಇ.ಡಿ. ರಾಜಕೀಯ ಪ್ರೇರಿತವಾಗಿ, ಅಧಿಕಾರ ಮೀರಿಸಿ ಸಮನ್ಸ್ ನೀಡಿದೆ ಎಂದು ವಾದಿಸಿದರು.
ಇದಕ್ಕೆ ಪ್ರತಿಯಾಗಿ, ಇ.ಡಿ. ಪರ ವಕೀಲರು, ವೀರೇಂದ್ರ ಮತ್ತು ಅನಿಲ್ ಗೌಡ ಇಬ್ಬರೂ ಕ್ಯಾಸಲ್ ರಾಕ್ ಕಂಪನಿಯಲ್ಲಿ ಷೇರು ಹೊಂದಿದ್ದಾರೆ ಎಂದು ತಿಳಿಸಿದರು. ಜಪ್ತಿ ಮಾಡಿರುವ ಲ್ಯಾಪ್ಟಾಪ್‌ನಲ್ಲಿ 29 ಕೋಟಿ ರೂ. ಲಾಭಾಂಶ ಪಡೆದಿರುವ ದಾಖಲೆಗಳು ಹಾಗೂ ಇಮೇಲ್ ಸಂದೇಶಗಳೂ ಸಾಕ್ಷಿಯಾಗಿದೆ ಎಂದರು. ಆದ್ದರಿಂದ ಉದ್ಯಮ ಪಾಲುದಾರಿಕೆಗೆ ಸಂಬಂಧಿಸಿ ಅವರ ಹೇಳಿಕೆ ಪಡೆಯಲು ಸಮನ್ಸ್ ನೀಡಲಾಗಿದೆ ಎಂದು ವಾದಿಸಿದರು.
ವಾದ-ಪ್ರತಿವಾದಗಳ ನಂತರ, ಹೈಕೋರ್ಟ್ ಇ.ಡಿ. ಸಮನ್ಸ್‌ಗೆ ತಡೆ ನೀಡಿ, ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಅನಿಲ್ ಗೌಡ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಆದೇಶಿಸಿದೆ.