Beijing: ಮಂದಗೊಳ್ಳುತ್ತಿರುವ ಆರ್ಥಿಕತೆಗೆ (Economy) ಶಕ್ತಿ ತುಂಬಲು ಹರಸಾಹಸ ನಡೆಸುತ್ತಿರುವ ಚೀನಾಗೆ (China) ಈಗ ಹೆಚ್ಚೆಚ್ಚು ಫಂಡಿಂಗ್ ಅಗತ್ಯತೆ ಇದೆ. ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಚೀನಾ (China) ಹೊಸ ಮಾರ್ಗ ಅನ್ವೇಷಿಸುತ್ತಿದೆ.
ಈ ನಿಟ್ಟಿನಲ್ಲಿ ಶ್ರೀಮಂತರನ್ನು ಚೀನಾ ಟಾರ್ಗೆಟ್ ಮಾಡಿದೆ. ವಿದೇಶಗಳಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ಚೀನಾದ ಅತಿ ಶ್ರೀಮಂತರಿಗೆ ಸರ್ಕಾರ ತೆರಿಗೆ ಹೇರಲು ಯೋಜಿಸಿದೆ. ಅಂದರೆ, ವಿದೇಶಗಳಲ್ಲಿ ಹೂಡಿಕೆ ಮಾಡಿ ಇವರು ಗಳಿಸುವ ಲಾಭಕ್ಕೆ ತೆರಿಗೆ ಕಟ್ಟಬೇಕಾಗಬಹುದು. ಈ ಕ್ರಮವನ್ನು ಸರ್ಕಾರ ಜಾರಿಗೊಳಿಸುವ ಪ್ರಕ್ರಿಯೆ ಆರಂಭಿಸಿದೆ ಎಂಬುದು ಬ್ಲೂಮ್ಬರ್ಗ್ ವರದಿಯಿಂದ ತಿಳಿದುಬರುತ್ತಿದೆ.
ಶ್ರೀಮಂತರು ಹೆಚ್ಚು ಶ್ರೀಮಂತರಾಗುವುದನ್ನು ನಿಯಂತ್ರಿಸುವುದು, ಜನಕಲ್ಯಾಣ ಯೋಜನೆಗಳ ಮೂಲಕ ಜನಸಾಮಾನ್ಯರನ್ನು ಬಲಪಡಿಸುವುದು ಸಂಪತ್ತು ಮರುಹಂಚಿಕೆ ವಿಧಾನಗಳಲ್ಲಿ ಪ್ರಮುಖವಾದುದು. ಚೀನಾ ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ. ಹಲವು ವರ್ಷಗಳಿಂದಲೂ ಸರ್ಕಾರವು ಶ್ರೀಮಂತರ ಮೇಲೆ ಹತೋಟಿ ಹೊಂದುವ ಕ್ರಮ ಕೈಗೊಳ್ಳುತ್ತಾ ಬಂದಿದೆ.
2018ರವರೆಗೆ ಚೀನಾದಲ್ಲಿ ಹೊಸ ಹೊಸ ಬಿಲಿಯನೇರ್ಗಳು ಹುಟ್ಟಿಕೊಳ್ಳುತ್ತಿದ್ದರು. ಸರ್ಕಾರಕ್ಕೆ ಟಾರ್ಗೆಟ್ ಆದ ಬಳಿಕ ಚೀನೀ ಶ್ರೀಮಂತರು ಬೇರೆ ದೇಶಗಳಿಗೆ ಹೋಗಿ ನೆಲಸುತ್ತಿರುವುದು ಹೆಚ್ಚಾಗುತ್ತಿದೆ.
ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ 2021ರಿಂದೀಚೆ ಚೀನಾದ 12 ಲಕ್ಷಕ್ಕೂ ಹೆಚ್ಚು ಜನರು, ಅದರಲ್ಲೂ ಹೆಚ್ಚಾಗಿ ಶ್ರೀಮಂತರು ದೇಶ ಬಿಟ್ಟು ಬೇರೆಡೆ ವಲಸೆ ಹೋಗಿದ್ದಾರೆ. ಒಂದು ಅಂದಾಜು ಪ್ರಕಾರ, ಚೀನಾ ಬಳಿ 24 ಟ್ರಿಲಿಯನ್ ಡಾಲರ್ನಷ್ಟು ವ್ಯಕ್ತಿಗತ ಸಂಪತ್ತು ಇದೆ. ಇದರಲ್ಲಿ 1 ಟ್ರಿಲಿಯನ್ ಡಾಲರ್ನಷ್ಟು ವೈಯಕ್ತಿಕ ಸಂಪತ್ತು ವಿದೇಶಗಳಲ್ಲಿ ಇದೆ.