ಜಮ್ಮು: ಅಮರನಾಥ ಯಾತ್ರೆ (Amarnath Yatra) ಮಾಡಲು ಬರುವ ಯಾತ್ರಿಕರಿಗೆ ಭದ್ರತೆ ಒದಗಿಸಲು ಭಾರತೀಯ ಸೇನೆ ‘ಆಪರೇಷನ್ ಶಿವ’ (‘Operation Shiva) ಎಂಬ ವಿಶೇಷ ಕಾರ್ಯಚರಣೆಯನ್ನು ಆರಂಭಿಸಿದೆ. ಇದರಲ್ಲಿ 8,500ಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಲಾಗಿದೆ. ಯಾತ್ರೆಯ ರಕ್ಷಣೆಗೆ ಡ್ರೋನ್‌ಗಳನ್ನೂ ನಿಯಂತ್ರಿಸಲು ಸಿ-ಯುಎಎಸ್ (Counter UAV System) ಗ್ರಿಡ್‌ಗಳನ್ನು ಸ್ಥಾಪಿಸಲಾಗಿದೆ.
ಈ ವರ್ಷದ ಅಮರನಾಥ ಯಾತ್ರೆ ಜುಲೈ 3 ರಂದು ಆರಂಭವಾಗಿದ್ದು, ಆಗಸ್ಟ್ 9 ರಂದು ಮುಗಿಯಲಿದೆ. ಯಾತ್ರೆಗೆ ಎರಡು ಮಾರ್ಗಗಳಿವೆ.
- ನುನ್ವಾನ್–ಪಹಲ್ಗಾಮ್ ಮಾರ್ಗ (ಅನಂತ್ನಾಗ್ ಜಿಲ್ಲೆ, 48 ಕಿಮೀ)
- ಬಾಲ್ಟಾಲ್ ಮಾರ್ಗ (ಗಂಡೇರ್ಬಾಲ್ ಜಿಲ್ಲೆ, 14 ಕಿಮೀ)
ಆಪರೇಷನ್ ಶಿವ ಎಂದರೇನು: ಯಾತ್ರೆ ಶಾಂತಿಯುತವಾಗಿರಲಿ, ಭದ್ರವಾಗಿರಲಿ ಎಂಬ ಉದ್ದೇಶದಿಂದ ಭಾರತೀಯ ಸೇನೆ, ನಾಗರಿಕ ಆಡಳಿತ ಮತ್ತು ಕೇಂದ್ರ ಭದ್ರತಾ ಪಡೆಯೊಂದಿಗೆ ಸೇರಿ ಈ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ಬೆದರಿಕೆ ಹಿನ್ನೆಲೆಯಲ್ಲಿ, ಈ ಬಾರಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ತಾಂತ್ರಿಕ ಸಂಪನ್ಮೂಲ, ಡ್ರೋನ್ ತಪಾಸಣೆ ವ್ಯವಸ್ಥೆ, ಭಯೋತ್ಪಾದನೆ ನಿಗ್ರಹದ ಕ್ರಮಗಳು ಕೈಗೊಳ್ಳಲಾಗಿದೆ.
ಆಪರೇಷನ್ ಶಿವ ಅಡಿಯಲ್ಲಿ ತಯಾರಿ
- 50ಕ್ಕಿಂತ ಹೆಚ್ಚು ಡ್ರೋನ್ ನಿಯಂತ್ರಣ ವ್ಯವಸ್ಥೆಗಳು ಮತ್ತು ಎಲೆಕ್ಟ್ರಾನಿಕ್ ವಾರ್ಫೇರ್ ಸಾಧನಗಳ ನಿಯೋಜನೆ
- ಸೇತುವೆ, ರಸ್ತೆ ಅಗಲೀಕರಣ, ವಿಪತ್ತು ನಿರ್ವಹಣೆಗೆ ಎಂಜಿನಿಯರ್ ತಂಡಗಳು
- 150ಕ್ಕೂ ಹೆಚ್ಚು ವೈದ್ಯರು, ವೈದ್ಯಕೀಯ ಸಿಬ್ಬಂದಿ
- 2 ಡ್ರೆಸ್ಸಿಂಗ್ ಕೇಂದ್ರಗಳು, 9 ವೈದ್ಯಕೀಯ ಸಹಾಯ ಕೇಂದ್ರಗಳು
- 100 ಹಾಸಿಗೆಗಳ ಆಸ್ಪತ್ರೆ, 2 ಲಕ್ಷ ಲೀಟರ್ ಆಮ್ಲಜನಕ ಸಾಮರ್ಥ್ಯದ 26 ಆಮ್ಲಜನಕ ಬೂತ್‌ಗಳು
- ತುರ್ತು ಪರಿಸ್ಥಿತಿಗೆ ಸೇನೆಯ ಹೆಲಿಕಾಪ್ಟರ್ ಸಿದ್ಧವಾಗಿವೆ
ಇದು ಅಮರನಾಥ ಯಾತ್ರಿಕರು ಭಯವಿಲ್ಲದೆ ಯಾತ್ರೆ ಮಾಡಬಹುದಾದಂತ ಭದ್ರತೆಯನ್ನು ಒದಗಿಸಲು ತೆಗೆದುಕೊಳ್ಳಲಾಗಿರುವ ಪ್ರಮುಖ ಕ್ರಮವಾಗಿದೆ.







