![Jindal Group awarded ‘Investor of the Decade’ award Jindal Group awarded ‘Investor of the Decade’ award](https://kannadatopnews.com/wp-content/uploads/2025/02/Photoshop_Online-news-copy-147.jpg)
Bengaluru: ಉದ್ಯಮ ವಲಯದಲ್ಲಿ ಮಹತ್ವದ ಕೊಡುಗೆ ನೀಡಿರುವ JSW ಗ್ರೂಪ್ ಗೆ (Jindal Group) ಕರ್ನಾಟಕ ಸರ್ಕಾರದಿಂದ ‘ದಶಕದ ಹೂಡಿಕೆದಾರ’ (Investor of the Decade) ಪ್ರಶಸ್ತಿ ನೀಡಲಾಗಿದೆ. ರಾಜ್ಯದಲ್ಲಿ ಉದ್ಯಮ ವಲಯದ ಬೆಳವಣಿಗೆಗೆ ಈ ಕಂಪನಿಯ ಮಹತ್ವದ ಪಾತ್ರವನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
ಈ ಪ್ರಶಸ್ತಿಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪೀಯುಶ್ ಗೋಯಲ್ ಅವರ ಸಮ್ಮುಖದಲ್ಲಿ JSW ಗ್ರೂಪಿಗೆ ಪ್ರದಾನ ಮಾಡಲಾಯಿತು. JSW ಸಿಎಮೆಂಟ್ ಮತ್ತು JSW ಪೇಂಟ್ಸ್ ಎಂಡಿ ಪಾರ್ಥ್ ಜಿಂದಾಲ್ ಅವರು ಗ್ರೂಪ್ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
JSW ಗ್ರೂಪ್ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಮತ್ತು ಔದ್ಯಮಿಕ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ರಾಜ್ಯದಲ್ಲಿ ಈಗಾಗಲೇ 1.2 ಲಕ್ಷ ಕೋಟಿ ರೂ. ಹೂಡಿಕೆ ಮಾಡಿದೆ. ಇದರ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಲಾಗಿದೆ.
ಕಂಪನಿಯು ಉಕ್ಕು ಉತ್ಪಾದನೆ, ಗ್ರೀನ್ ಎನರ್ಜಿ, ಸಿಮೆಂಟ್ ಉತ್ಪಾದನೆ ಮತ್ತು ಬಂದರು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಆರ್ಥಿಕ ದೃಢತೆ ಮತ್ತು ದೀರ್ಘಕಾಲೀನ ಬೆಳವಣಿಗೆ ಸಾಧಿಸಿದೆ. ವಿಜಯನಗರದ JSW ಸ್ಟೀಲ್ ಘಟಕವು ದೇಶದ ಅತಿದೊಡ್ಡ ಉಕ್ಕಿನ ಸ್ಥಾವರವಾಗಿ ಗುರುತಿಸಿಕೊಂಡಿದೆ. ನವೀಕರಿಸಬಹುದಾದ ಶಕ್ತಿ, ಸಿಮೆಂಟ್ ಮತ್ತು ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮೂಲಕ ಕಂಪನಿಯು ಉದ್ಯಮ ವಿಸ್ತರಣೆಯಲ್ಲಿ ಮಹತ್ವದ ಹೆಜ್ಜೆ ಹಾಕಿದೆ.
ಕರ್ನಾಟಕ ಹೂಡಿಕೆದಾರರ ಸಮಾವೇಶದಲ್ಲಿ JSW ಮತ್ತಷ್ಟು 1 ಲಕ್ಷ ಕೋಟಿ ರೂ. ಹೂಡಿಕೆಗೆ ಒಪ್ಪಿಕೊಂಡಿದ್ದು, ಇದಕ್ಕಾಗಿ ಎಂಒಯು (Memorandum of Understanding) ಗೆ ಸಹಿ ಹಾಕಿದೆ. ಮುಂದಿನ ಕೆಲವು ವರ್ಷಗಳಲ್ಲಿ 1.2 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಕಂಪನಿ ಬದ್ಧವಾಗಿದೆ.
JSW ಗ್ರೂಪ್ ನ ಛೇರ್ಮನ್ ಸಜ್ಜನ್ ಜಿಂದಾಲ್ ಅವರು ಕರ್ನಾಟಕವನ್ನು ತಮ್ಮ ಕರ್ಮಭೂಮಿ ಎಂದು ವರ್ಣನೆ ಮಾಡಿದ್ದು, ಹೂಡಿಕೆ ಸ್ನೇಹಿ ನೀತಿ, ಕೌಶಲ್ಯವಂತ ಕಾರ್ಮಿಕರು ಹಾಗೂ ರಾಜ್ಯದ ಪ್ರಗತಿಪರ ಆಡಳಿತವು ಉದ್ಯಮಗಳ ಬೆಳವಣಿಗೆಗೆ ಸೂಕ್ತ ಪರಿಸರ ಒದಗಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಗೌರವಯುತ ಪ್ರಶಸ್ತಿ ರಾಜ್ಯವನ್ನು ಕೈಗಾರಿಕಾ ಪ್ರಗತಿಯ ಹಾದಿಯ ಮೇಲೆ ಮುಂದುವರಿಸುವಲ್ಲಿ ಜೆಎಸ್ಡಬ್ಲ್ಯು ನ ಮಹತ್ವದ ಪಾತ್ರವನ್ನು ಮತ್ತಷ್ಟು ಬಲಪಡಿಸಿದೆ.