Rajgir (Bihar): ಎಂಟು ವರ್ಷಗಳ ಬಳಿಕ ಭಾರತವು ಏಷ್ಯಾಕಪ್ ಹಾಕಿ ಚಾಂಪಿಯನ್ (Asia Cup hockey) ಆಗಿದೆ. ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಭಾರತ 4-1 ಗೋಲುಗಳಿಂದ ಸೋಲಿಸಿತು. ಇದರೊಂದಿಗೆ ಭಾರತ ಮುಂದಿನ ವರ್ಷದ ಎಫ್ಐಎಚ್ ವಿಶ್ವಕಪ್‌ಗೆ ಅರ್ಹತೆಯೂ ಗಳಿಸಿದೆ.
ಇದುವರೆಗೆ ಭಾರತ ನಾಲ್ಕು ಏಷ್ಯಾಕಪ್ ಪ್ರಶಸ್ತಿಗಳನ್ನು ಗೆದ್ದಿದೆ. ಐದು ಬಾರಿ ಜಯಿಸಿದ ಕೊರಿಯಾ ನಂತರ ಭಾರತ ಅತ್ಯಂತ ಯಶಸ್ವಿ ತಂಡವಾಗಿದೆ. 2003 ಕೌಲಾಲಂಪುರ್, 2007 ಚೆನ್ನೈ, 2017 ಢಾಕಾ ನಂತರ ಈಗ ಭಾರತ ಮತ್ತೊಮ್ಮೆ ಚಾಂಪಿಯನ್ ಆಗಿದೆ.
ಸುಖ್ಜೀತ್ ಸಿಂಗ್ ಪಂದ್ಯ ಆರಂಭದಲ್ಲೇ ಮೊದಲ ಗೋಲು ಗಳಿಸಿದರು. ದಿಲ್ಪ್ರೀತ್ ಸಿಂಗ್ 28ನೇ ಮತ್ತು 45ನೇ ನಿಮಿಷಗಳಲ್ಲಿ ಎರಡು ಗೋಲು ಗಳಿಸಿದರು. ಅಮಿತ್ ರೋಹಿದಾಸ್ 50ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದರು. ಕೊರಿಯಾ ಪರ ಡೈನ್ ಸನ್ 51ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.
ಭಾರತ ಆರಂಭದಿಂದಲೇ ಚೆಂಡಿನ ಮೇಲೆ ಹಿಡಿತ ಸಾಧಿಸಿತು. ರಕ್ಷಣಾ, ಮಿಡ್‌ಫೀಲ್ಡ್ ಮತ್ತು ಫಾರ್ವರ್ಡ್ ಆಟಗಾರರ ನಡುವೆ ಉತ್ತಮ ಸಮನ್ವಯ ಕಂಡುಬಂತು. ಕೊರಿಯಾ ಹೆಚ್ಚು ರಕ್ಷಣೆಗೆ ಒತ್ತುಕೊಟ್ಟರೂ, ಭಾರತದ ಆಕ್ರಮಣಕಾರಿ ಆಟದ ಎದುರು ಯಶಸ್ವಿಯಾಗಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಹಾಕಿ ತಂಡವನ್ನು ಅಭಿನಂದಿಸಿ, ಇದು ಭಾರತೀಯ ಹಾಕಿ ಮತ್ತು ಕ್ರೀಡೆಗಳಿಗೆ ಹೆಮ್ಮೆಯ ಕ್ಷಣವೆಂದು ಹೇಳಿದ್ದಾರೆ. ರಾಜ್‌ಗಿರ್‌ನಲ್ಲಿ ನಡೆದ ಈ ಪಂದ್ಯಾವಳಿಯನ್ನು ಶ್ಲಾಘಿಸಿದ ಮೋದಿ, “ದಕ್ಷಿಣ ಕೊರಿಯಾವನ್ನು ಸೋಲಿಸಿ ಏಷ್ಯಾಕಪ್ ಗೆದ್ದಿರುವುದು ವಿಶೇಷ ಸಾಧನೆ” ಎಂದಿದ್ದಾರೆ.