ಲಂಡನ್ (ಅಕ್ಟೋಬರ್ 15): 2030ರ ಶತಮಾನೋತ್ಸವ ಕಾಮನ್‌ವೆಲ್ತ್ ಕ್ರೀಡಾಕೂಟ (Commonwealth Games 2030) ಆಯೋಜನೆಗೆ ಭಾರತದ ಗುಜರಾತ್‌ನ ಅಹಮದಾಬಾದ್ ನಗರವನ್ನು ಅಧಿಕೃತವಾಗಿ ಶಿಫಾರಸು ಮಾಡಲಾಗಿದೆ. ಕಾಮನ್‌ವೆಲ್ತ್ ಗೇಮ್ಸ್ ಕಾರ್ಯನಿರ್ವಾಹಕ ಮಂಡಳಿ ಈ ನಿರ್ಧಾರವನ್ನು ಪ್ರಕಟಿಸಿದ್ದು, ಅಂತಿಮ ಘೋಷಣೆ ನವೆಂಬರ್ 26ರಂದು ಗ್ಲಾಸ್ಗೋದಲ್ಲಿ ನಡೆಯಲಿರುವ ಮಹಾಸಭೆಯಲ್ಲಿ ಪ್ರಕಟಗೊಳ್ಳಲಿದೆ.
ಈ ಸ್ಪರ್ಧೆಯ ಆತಿಥ್ಯಕ್ಕಾಗಿ ನೈಜೀರಿಯಾದ ರಾಜಧಾನಿ ಅಬುಜಾ ಸಹ ಬಿಡ್ ಸಲ್ಲಿಸಿತ್ತು, ಆದರೆ ವರದಿಗಳ ಪ್ರಕಾರ ಅಬುಜಾ ನಗರದಲ್ಲಿ 2034ರ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
“ಭಾರತ ಮತ್ತು ನೈಜೀರಿಯಾ ಇಬ್ಬರ ಪ್ರಸ್ತಾಪಗಳು ಅತ್ಯಂತ ಸ್ಪೂರ್ತಿದಾಯಕವಾಗಿದ್ದವು. ಶತಮಾನೋತ್ಸವ ಕ್ರೀಡಾಕೂಟವನ್ನು ವಿಶೇಷವಾಗಿ ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ,” ಎಂದು ಕಾಮನ್‌ವೆಲ್ತ್ ಗೇಮ್ಸ್‌ನ ಮಧ್ಯಂತರ ಅಧ್ಯಕ್ಷ ಡಾ. ಡೊನಾಲ್ಡ್ ರುಕರೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ 2010ರಲ್ಲಿ ದೆಹಲಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆಯೋಜಿಸಲ್ಪಟ್ಟಿದ್ದರೆ, ಭಾರತ ಈಗ 2036ರ ಒಲಿಂಪಿಕ್ಸ್‌ಗಾಗಿ ಬಿಡ್ ಸಲ್ಲಿಸಿರುವುದು ರಾಷ್ಟ್ರದ ಕ್ರೀಡಾ ಶಕ್ತಿಯ ಮತ್ತೊಂದು ಸೂಚನೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.







