New Delhi: ಹಲವು ಬ್ರೋಕರೇಜ್ ಸಂಸ್ಥೆಗಳು (brokerage house) ಹಾಗೂ RBI ಮೊದಲಾದ ಸಂಸ್ಥೆಗಳು ಭಾರತದ ಆರ್ಥಿಕತೆ (Indian economy) ಈ ಹಣಕಾಸು ವರ್ಷದಲ್ಲಿ ಶೇ. 7ರ ದರದ ಆಸುಪಾಸಿನಲ್ಲಿ ಬೆಳೆಯಬಹುದು ಎಂದು ಅಂದಾಜು ಮಾಡಿವೆ.
ಆದರೆ, ಜಪಾನ್ನ ಬ್ರೋಕರೇಜ್ ಸಂಸ್ಥೆ ನೊಮುರಾ (Japanese brokerage firm Nomura) ಭಿನ್ನ ಅಭಿಪ್ರಾಯಪಟ್ಟಿದೆ. ಭಾರತದ ಆರ್ಥಿಕತೆ ಆವರ್ತಕ ನಿಧಾನಗತಿಯ ಚಕ್ರದ (cyclical slowdown) ಆರಂಭದಲ್ಲಿದೆ. GDP ನಿರೀಕ್ಷಿಸಿದ್ದಕ್ಕಿಂತ ಕಡಿಮೆ ವೇಗದಲ್ಲಿ ಬೆಳೆಯುತ್ತದೆ ಎಂದು ನೊಮುರಾ ಅಭಿಪ್ರಾಯಪಟ್ಟಿದೆ.
2024-25ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ 7.2ರಷ್ಟು ಹೆಚ್ಚಾಗಬಹುದು ಎಂದು RBI ಮಾಡಿದ್ದ ಅಂದಾಜನ್ನು ನೊಮುರಾ ಸಾರಸಗಟಾಗಿ ತಳ್ಳಿಹಾಕಿದೆ. RBI ತೀರಾ ಹೆಚ್ಚು ಆಶಾದಾಯಕವಾಗಿದೆ.
ಭಾರತದ ಆರ್ಥಿಕತೆ ಅಷ್ಟು ವೇಗದಲ್ಲಿ ಹೆಚ್ಚಾಗಲ್ಲ. 2024-25ರಲ್ಲಿ ಜಿಡಿಪಿ ದರ ಶೇ. 6.7ಕ್ಕಿಂತಲೂ ಕಡಿಮೆ ಇರಬಹುದು. 2025-26ರಲ್ಲಿ ಶೇ. 6.8 ರಷ್ಟಾಗಬಹುದು ಎಂದು ಜಪಾನ್ ಮೂಲದ ಈ ಬ್ರೋಕರೇಜ್ ಸಂಸ್ಥೆ ಹೇಳಿದೆ.
ಭಾರತದ ನಗರಭಾಗದ ಜನರ ವೆಚ್ಚ ಇತ್ತೀಚೆಗೆ ಕಡಿಮೆ ಮಟ್ಟವನ್ನು ಬೊಟ್ಟು ಮಾಡುತ್ತಿವೆ. ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಇಳಿಮುಖ, ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ, ಎಫ್ಎಂಸಿಜಿ ಕಂಪನಿಗಳಿಗೆ ನಗರಭಾಗದಲ್ಲಿ ಬಿಸಿನೆಸ್ ಇಳಿಮುಖವಾಗುತ್ತಿರುವುದು, ಇತ್ಯಾದಿ ಸಂಗತಿಗಳನ್ನು ನೊಮುರಾ ತನ್ನ ಅನಿಸಿಕೆಗೆ ಸೇರಿಸಿಕೊಂಡಿದೆ.
ಕಂಪನಿಗಳು ತಮ್ಮ ಸಂಬಳ ವೆಚ್ಚವನ್ನು ಕಡಿಮೆ ಮಾಡುತ್ತಿವೆ. ಲಿಸ್ಟೆಡ್ ಕಂಪನಿಗಳ ವೇತನ ವೆಚ್ಚವು ಸೆಪ್ಟೆಂಬರ್ ಕ್ವಾರ್ಟರ್ನಲ್ಲಿ ಶೇ. 0.8ರಷ್ಟು ಮಾತ್ರ ಹೆಚ್ಚಾಗಿದೆ. ಜೂನ್ ಕ್ವಾರ್ಟರ್ನಲ್ಲಿ ಇದು ಶೇ. 1.2 ಇತ್ತು. 2023-24ರಲ್ಲಿ ಶೇ. 2.5, 2022-23ರಲ್ಲಿ ಶೇ. 10.8ರಷ್ಟು ವೇತನ ವೆಚ್ಚ ಹೆಚ್ಚಳವಾಗಿತ್ತು ಎಂದು ನೊಮುರಾ ವಿಶ್ಲೇಷಿಸಿದೆ.
ಕೋವಿಡ್ ನಂತರ ಹೆಚ್ಚಿದ್ದ ಬೇಡಿಕೆ ಈಗ ಮಂದಗೊಂಡಿದೆ. ಹಣಕಾಸು ನೀತಿ ಬಿಗಿಯಾಗಿದೆ. ಅಸುರಕ್ಷಿತ ಸಾಲಗಳ ಮೇಲೆ RBI ಹಾಕಿರುವ ಬಿಗಿಪಟ್ಟುಗಳಿಂದಾಗಿ ಪರ್ಸನಲ್ ಲೋನ್ ಕಡಿಮೆ ಆಗಿದೆ. ಎನ್ಬಿಎಫ್ಸಿಗಳ ಬಿಸಿನೆಸ್ ಕಡಿಮೆ ಆಗಿದೆ ಎಂದು ಈ ಬ್ರೋಕರೇಜ್ ಸಂಸ್ಥೆ ಅಭಿಪ್ರಾಯಪಟ್ಟಿದೆ.