
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ (Virat Kohli) ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ವಿಶೇಷವಾಗಿ, ಪಾಕಿಸ್ತಾನದಲ್ಲೂ ಕೊಹ್ಲಿಗೆ ಅಪಾರ ಅಭಿಮಾನಿ ಬಳಗವಿದೆ. ಇದಕ್ಕೆ ಸಾಕ್ಷಿಯೇ ಇತ್ತೀಚಿನ ಈ ವಿಡಿಯೋ! ಪಾಕಿಸ್ತಾನ್ ವಿರುದ್ಧ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದನ್ನು ಪಾಕ್ ಅಭಿಮಾನಿಗಳು ಸಂತೋಷದಿಂದ ಆಚರಿಸಿದ್ದಾರೆ. ಪಾಕಿಸ್ತಾನ್ ತಂಡ ಸೋತಿದ್ದರೂ, ಕೊಹ್ಲಿಯ ಶತಕಕ್ಕೆ ಪಾಕ್ ಫ್ಯಾನ್ಸ್ ಸಂಭ್ರಮಿಸಿದುದು ಗಮನ ಸೆಳೆದಿದೆ.
ದುಬೈನ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 111 ಎಸೆತಗಳಲ್ಲಿ 100 ರನ್ ಬಾರಿಸಿದರು. ಭಾರತದ ಗೆಲುವಿಗೆ 2 ರನ್ ಬೇಕಾಗಿದ್ದಾಗ, ಕೊಹ್ಲಿ ಅದ್ಭುತ ಫೋರ್ ಬಾರಿಸಿ ಶತಕ ಪೂರೈಸಿದರು.
ಪಾಕಿಸ್ತಾನ್ ತಂಡ ಸೋಲುವ ಸಾಧ್ಯತೆ ಹೆಚ್ಚಾಗುತ್ತಿದ್ದಂತೆ, ಪಾಕ್ ಅಭಿಮಾನಿಗಳು ಕೊಹ್ಲಿಯ ಶತಕಕ್ಕಾಗಿ ಉತ್ಸುಕರಾಗಿ ಕಾಯುತ್ತಿದ್ದರು. ಕೊನೆಗೂ ಕೊಹ್ಲಿ ಫೋರ್ ಹೊಡೆದು ಶತಕ ಪೂರೈಸಿದಾಗ, ಇಸ್ಲಾಮಾಬಾದ್‌ನಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆಯುತ್ತಿದೆ.
ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಾಕಿಸ್ತಾನ್ 49.4 ಓವರ್‌ಗಳಲ್ಲಿ 241 ರನ್ ಗಳಿಸಿ ಆಲೌಟ್ ಆಯಿತು. 242 ರನ್ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 42.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 244 ರನ್ ಗಳಿಸಿ, 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ!