ಫೆಬ್ರವರಿ 11ರಿಂದ ಮೂರು ದಿನಗಳ ಕಾಲ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ (Invest Karnataka) ಶೃಂಗಸಭೆ ಯಲ್ಲಿ 10 ಲಕ್ಷ ಕೋಟಿ ರೂ. ಹೂಡಿಕೆ ಗುರಿ ನಿಗದಿಯಾಗಿದೆ. ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ಅನಾವರಣಗೊಳಿಸಲು ಸಿದ್ಧವಾಗಿದೆ, ಇದು ಸ್ಥಳೀಯ ಉತ್ಪಾದನೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಒದಗಿಸುತ್ತದೆ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.
ಹೊಸ ಕೈಗಾರಿಕಾ ನೀತಿಯಡಿ, ಹೂಡಿಕೆದಾರರು ವ್ಯವಹಾರ ಆಧಾರಿತ ಅಥವಾ ಬಂಡವಾಳ ಆಧಾರಿತ ಪ್ರೋತ್ಸಾಹಗಳ ನಡುವೆ ಆಯ್ಕೆ ಮಾಡಿಕೊಳ್ಳಬಹುದು. ಹಿಂದುಳಿದ ಪ್ರದೇಶಗಳಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಹೆಚ್ಚುವರಿ ಪ್ರೋತ್ಸಾಹ ನೀಡಲಾಗುತ್ತದೆ. ವಿಶೇಷವಾಗಿ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವ ಕಂಪನಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ.
ಜಾಗತಿಕ ಕಂಪನಿಗಳನ್ನು ಕರ್ನಾಟಕದಲ್ಲಿಯೇ ಉತ್ಪಾದನೆ ಮಾಡಲು ಪ್ರೋತ್ಸಾಹಿಸಲು ಶೇ.10 ಹೆಚ್ಚುವರಿ ಪ್ರೋತ್ಸಾಹ ನೀಡಲಾಗುತ್ತದೆ. ಹಿಂದುಳಿದ ತಾಲ್ಲೂಕುಗಳಲ್ಲಿ ಹೂಡಿಕೆ ಮಾಡಿದರೆ, 3% – 5% ಹೆಚ್ಚುವರಿ ಪ್ರೋತ್ಸಾಹ ದೊರೆಯಲಿದೆ.
ಈ ಶೃಂಗಸಭೆಗೆ 18 ದೇಶಗಳು ಭಾಗವಹಿಸುತ್ತವೆ, 2,000ಕ್ಕೂ ಹೆಚ್ಚು ಹೂಡಿಕೆದಾರರು ನೋಂದಾವಣೆ ಮಾಡಿದ್ದಾರೆ. ಒಂಬತ್ತು ದೇಶಗಳು ತಮ್ಮ ಕೈಗಾರಿಕೆ ಮತ್ತು ಹೂಡಿಕೆ ಸಾಮರ್ಥ್ಯವನ್ನು ಪ್ರದರ್ಶಿಸಲು ಮಂಟಪಗಳನ್ನು ಸ್ಥಾಪಿಸುತ್ತವೆ.
ಈ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಲಾಗಿದೆ. ಮೋದಿ ಪ್ಯಾರಿಸ್ ಭೇಟಿಯಿಂದಾಗಿ ಭಾಗವಹಿಸದಿರುವ ಸಾಧ್ಯತೆ ಇದೆ ಎಂದು ಪಾಟೀಲ್ ಹೇಳಿದ್ದಾರೆ.