ಭಾರತ–ಇಂಗ್ಲೆಂಡ್ ನಡುವೆ ನಡೆದ ಟೆಸ್ಟ್ ಸರಣಿ 2-2ರಿಂದ ಮುಗಿದ ಬಳಿಕ, ಇಂಗ್ಲೆಂಡ್ ತಂಡ ಈಗ ಟಿ20 ಕ್ರಿಕೆಟ್‌ಗೆ ಸಜ್ಜಾಗಿದೆ. ಅವರು ಐರ್ಲೆಂಡ್ ವಿರುದ್ಧ ಮೂರು ಟಿ20 ಪಂದ್ಯಗಳನ್ನು ಆಡಲಿದ್ದಾರೆ. ಈ ಸರಣಿ ಸೆಪ್ಟೆಂಬರ್ 17ರಿಂದ ಆರಂಭವಾಗಲಿದೆ.
ನಾಯಕ ಹ್ಯಾರಿ ಬ್ರೂಕ್, ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್ ಮತ್ತು ಜೇಮಿ ಸ್ಮಿತ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕೋಚ್ ಬ್ರೆಂಡನ್ ಮೆಕಲಮ್ ಬದಲಿಗೆ ಮಾರ್ಕಸ್ ಟ್ರೆಸ್ಕೊಥಿಕ್ ತಾತ್ಕಾಲಿಕ ಕೋಚ್ ಆಗಿ ನೇಮಕಗೊಂಡಿದ್ದಾರೆ. ಹ್ಯಾರಿ ಬ್ರೂಕ್ ಇಲ್ಲದ ಕಾರಣ ಜೆಕಬ್ ಬೆಥೆಲ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.
21 ವರ್ಷದ ಜೆಕಬ್ ಬೆಥೆಲ್ ಇಂಗ್ಲೆಂಡ್ ತಂಡದ ಕಿರಿಯ ನಾಯಕನಾಗಿ ಆಯ್ಕೆಗೊಂಡಿದ್ದಾರೆ. ಇದರೊಂದಿಗೆ ಅವರು 136 ವರ್ಷದ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಮೊದಲು ಈ ದಾಖಲೆಯು 23ನೇ ವಯಸ್ಸಿನಲ್ಲಿ ನಾಯಕತ್ವ ವಹಿಸಿಕೊಂಡ ಮಾಂಟಿ ಬೌಡೆನ್ ಅವರ ಹೆಸರಿನಲ್ಲಿ ಇತ್ತು.
ಇಂಗ್ಲೆಂಡ್ ತಂಡದ ಆಯ್ಕೆದಾರ ಲ್ಯೂಕ್ ರೈಟ್, ಬೆಥೆಲ್ ಅವರ ನಾಯಕತ್ವ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ಐರ್ಲೆಂಡ್ ಸರಣಿ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಭವ ನೀಡಲಿದೆ ಎಂದಿದ್ದಾರೆ.
ಐರ್ಲೆಂಡ್ ಪ್ರವಾಸಕ್ಕೆ ಇಂಗ್ಲೆಂಡ್ ತಂಡ: ಜೆಕಬ್ ಬೆಥೆಲ್ (ನಾಯಕ), ರೆಹಾನ್ ಅಹ್ಮದ್, ಸೋನಿ ಬೇಕರ್, ಟಾಮ್ ಬ್ಯಾಂಟನ್, ಜೋಸ್ ಬಟ್ಲರ್, ಲಿಯಾಮ್ ಡಾಸನ್, ಟಾಮ್ ಹಾರ್ಟ್ಲಿ, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಜೇಮೀ ಓವರ್ಟನ್, ಮ್ಯಾಥ್ಯೂ ಪಾಟ್ಸ್, ಆದಿಲ್ ರಶೀದ್, ಫಿಲ್ ಸಾಲ್ಟ್, ಲ್ಯೂಕ್ ವುಡ್.








