Kolar, Karnataka : ರಾಜ್ಯ ರಾಜಕೀಯದಲ್ಲಿ ಮರುಬಾರಿ ಸಿಎಂ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಕುರಿತ ಚರ್ಚೆ ಚುರುಕುಗೊಂಡಿರುವಂತೆಯೇ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು “ಈ ನಿರ್ಧಾರ ಸಂಪೂರ್ಣವಾಗಿ ಕಾಂಗ್ರೆಸ್ ಹೈಕಮಾಂಡ್‌ನ ಕೈಯಲ್ಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಕೋಲಾರಕ್ಕೆ ಖಾಸಗಿ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ ಅವರು, “ನಾನು ಸಿಎಂ ಆಗುವ ಆಸೆ ಯಾವುದೂ ಇಲ್ಲ. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ದನಾಗಿರುತ್ತೇನೆ,” ಎಂದು ಹೇಳಿದ್ದಾರೆ.
“ಸಚಿವ ಪರಮೇಶ್ವರ್ ಅವರು ನನ್ನ ಬಗ್ಗೆ ಹೇಳಿರುವ ಮಾತುಗಳು ತುಂಬಾ ಗೌರವದಾಯಕ. ಅವರು ಹಿರಿಯ ನಾಯಕರು, 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ನಾವು ಎಲ್ಲರೂ ಒಟ್ಟಾಗಿ ಹೈಕಮಾಂಡ್‌ನ ನಿರ್ಧಾರಕ್ಕೆ ಬದ್ಧರಾಗಿದ್ದೇವೆ,” ಎಂದು ಮುನಿಯಪ್ಪ ಸ್ಪಷ್ಟಪಡಿಸಿದರು.
ಇತ್ತೀಚೆಗೆ ಶಿವಮೊಗ್ಗದಲ್ಲಿ ಮುನಿಯಪ್ಪ ಬೆಂಬಲಿಗರು “ಮುಂದಿನ ಮುಖ್ಯಮಂತ್ರಿ ಮುನಿಯಪ್ಪ” ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಗೃಹ ಸಚಿವ ಪರಮೇಶ್ವರ್ ಅವರು “ಮುನಿಯಪ್ಪ ಅವರು ಏಳು ಬಾರಿ ಸಂಸತ್ತಿಗೆ ಆಯ್ಕೆಯಾದ ಹಿರಿಯ ನಾಯಕರು” ಎಂದು ಪ್ರಶಂಸಿಸಿದ್ದರು.
ಮುಂದುವರಿಸಿ ಮಾತನಾಡಿದ ಮುನಿಯಪ್ಪ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೂ ರಾಜ್ಯದ ಅಭಿವೃದ್ಧಿಗೆ ಬದ್ಧರಾಗಿದ್ದಾರೆ. ನಾನು ಅವರ ಕಾರ್ಯಗಳಿಂದ ಸಂತೋಷವಾಗಿದ್ದೇನೆ,” ಎಂದರು.
ಸತೀಶ್ ಜಾರಕಿಹೊಳಿ ಬೆಂಬಲಿಗರು ಮುಂದಿನ ಸಿಎಂ ಆಗಿ ಅವರ ಹೆಸರನ್ನು ಮುಂದಿಟ್ಟಿರುವ ಬಗ್ಗೆ ಕೇಳಿದಾಗ ಮುನಿಯಪ್ಪ ಹೇಳಿದರು — “ಜಾರಕಿಹೊಳಿ ಒಬ್ಬ ನಿಷ್ಠಾವಂತ ಕಾಂಗ್ರೆಸ್ ನಾಯಕ, ಪಕ್ಷದೊಳಗೆ ಎಲ್ಲರೂ ಒಂದೇ ಕುಟುಂಬದವರು.”
“ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. 136 ಶಾಸಕರು ಅಭಿವೃದ್ಧಿ ಕಾರ್ಯಗಳಿಗೆ ಬದ್ಧರಾಗಿದ್ದಾರೆ. ಆದರೆ ಕೆಲವು ಅಂಶಗಳು ಬೆಳಗಾದರೆ ದಾರಿತಪ್ಪಿಸುವ ಪ್ರಯತ್ನ ನಡೆಯುತ್ತಿದೆ,” ಎಂದು ಮುನಿಯಪ್ಪ ವ್ಯಂಗ್ಯವಾಡಿದರು.







