Karwar: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ (MLA Satish Sail) ಅವರ ಮನೆ ಮೇಲೆ ಬುಧವಾರ ಬೆಳಗ್ಗೆಯೇ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ. 6 ಕಾರುಗಳಲ್ಲಿ ಬಂದ 24 ಕ್ಕೂ ಹೆಚ್ಚು ಅಧಿಕಾರಿಗಳು ಮನೆಯಲ್ಲಿರುವ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಕಾರಣ ಸೈಲ್ ಬೆಂಗಳೂರಿನಲ್ಲಿದ್ದಾರೆ.
ಸತೀಶ್ ಸೈಲ್ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ, ಪ್ರಸ್ತುತ ಜಾಮೀನಿನಲ್ಲಿ ಹೊರಗಿದ್ದಾರೆ. ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಯ ಮೂಲಕ ಬೇಲೆಕೇರಿ ಬಂದರಿನಿಂದ ವಿದೇಶಕ್ಕೆ ಅಕ್ರಮವಾಗಿ ಅದಿರು ಸಾಗಾಟ ಮಾಡಿದ ಪ್ರಕರಣದಲ್ಲಿ ಅವರು ದೋಷಿಗಳೆಂದು ತೀರ್ಪು ಬಂದಿತ್ತು. ಕಳೆದ ವರ್ಷ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಮತ್ತು ₹44 ಕೋಟಿಗೂ ಹೆಚ್ಚು ದಂಡ ವಿಧಿಸಿತ್ತು.
ಸೈಲ್ ಅವರು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ, ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇಡಿಸಲು ಆದೇಶ ಪಡೆದುಕೊಂಡಿದ್ದರು. ಹೈಕೋರ್ಟ್ ದಂಡ ಮೊತ್ತದ 25% ಠೇವಣಿ ಇಡುವ ಶರತ್ತಿನ ಮೇಲೆ ಜಾಮೀನು ನೀಡಿತ್ತು.