Kolar : “ದೀಪವು ಯಾವುದೇ ಜಾತಿ, ಧರ್ಮಗಳ ಭೇದಭಾವವಿಲ್ಲದೆ ಸಮಾನತೆಯ ಬೆಳಕನ್ನು ಹಂಚುವಂತೆ, ಮಾನವಜಾತಿ ಒಂದೇ, ಮಾನವಧರ್ಮ ಒಂದೇ ಎಂಬ ಸಂದೇಶವನ್ನು ಹೊತ್ತಿದೆ. ಇದು ಕಾರ್ತಿಕ ಮಾಸದ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ,” ಎಂದು ಬೆಂಗಳೂರು ಬೇಲಿಮಠದ ಮಹಾ ಸಂಸ್ಥಾನದ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ನಾಗಲಾಪುರ ವೀರಧರ್ಮ ಸಿಂಹಾಸನ ಮಠದಲ್ಲಿ, ಲೋಕಕಲ್ಯಾಣಾರ್ಥ ಶಿವ ಪಾರ್ವತಿ ಕಲ್ಯಾಣೋತ್ಸವ ಹಾಗೂ ಲಿಂಗೈಕ್ಯ ಶ್ರೀ ಗುರುಲಿಂಗರಾಜ ಶಿವಾಚಾರ್ಯ ಸ್ವಾಮಿಗಳ 22ನೇ ವರ್ಷದ ಸಂಸ್ಮರಣೋತ್ಸವದ ಅಂಗವಾಗಿ ಮಹಾಮೃತ್ಯುಂಜಯ ಹೋಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿದ್ದು, ಧರ್ಮಜಾಗೃತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮಹಾಸ್ವಾಮಿಗಳು ವಹಿಸಿದ್ದರು.
“ಕಲ್ಯಾಣವೆಂದರೆ ಎಲ್ಲರ ಸಹಭಾಗಿತ್ವದಲ್ಲಿ ಭಾವೈಕ್ಯತೆಯನ್ನು ಮೂಡಿಸುವ ಪವಿತ್ರ ಕಾರ್ಯ. ಆಚಾರಧರ್ಮ ಮತ್ತು ಸತ್ಸಂಗದಲ್ಲಿ ಸಾಧನೆಯ ಚಿಂತನೆ ಜ್ಞಾನದ ಜ್ಯೋತಿಯಾಗಿ ಬೆಳಗಬೇಕು,” ಎಂದು ಮಹಾಸ್ವಾಮಿಗಳು ತಿಳಿಸಿದರು.
“ಮಠಮಾನ್ಯಗಳು ಭಾವನೆಗಳನ್ನು ಸಂಗ್ರಹಿಸಿ, ಪ್ರಾಚೀನ ಸಂಸ್ಕಾರವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿವೆ. ಮಾನವೀಯ ಮೌಲ್ಯಗಳನ್ನು ನಮ್ಮ ಮುಂದಿನ ತಲೆಮಾರಿಗೆ ಪರಿಚಯಿಸಬೇಕಾದ ಅಗತ್ಯವಿದೆ. ಭಾರತವು ಧರ್ಮ ಮತ್ತು ಸಂಸ್ಕೃತಿಯ ಭವ್ಯ ಪರಂಪರೆಯನ್ನು ಹೊತ್ತಿದೆ,” ಎಂದು ಅವರು ಕರೆ ನೀಡಿದರು.
ಕನಕಪುರದ ಚಿಕ್ಕಕಲ್ಲುಬಾಳು ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, “ಮನುಷ್ಯನು ಮಾನವೀಯತೆಯಿಂದ ಬಾಳಬೇಕು. ದಾನಧರ್ಮಗಳಿಂದ ನೆಮ್ಮದಿ ದೊರೆಯುವಷ್ಟು ಆಸ್ತಿ ಪಾಸ್ತಿ ನೀಡುವುದಿಲ್ಲ. ಜೀವನದಲ್ಲಿ ಸಂಸ್ಕೃತಿಯನ್ನೂ ಸಂಸ್ಕಾರವನ್ನೂ ಅಳವಡಿಸಿಕೊಳ್ಳುವುದು ಮುಖ್ಯ,” ಎಂದು ಅಭಿಪ್ರಾಯಪಟ್ಟರು.
ನಾಗಲಾಪುರ ಮಠಾಧ್ಯಕ್ಷ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, “ಮಠಗಳು ರಾಜಮಹಾರಾಜರ ಕಾಲದಿಂದಲೇ ಧಾರ್ಮಿಕ ಮತ್ತು ಸಾಮಾಜಿಕ ಪರಂಪರೆಯನ್ನು ಉಳಿಸಲು ಅಗತ್ಯವಾದ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುತ್ತಿವೆ. ಇದು ಭಕ್ತಿ ಮತ್ತು ಶ್ರದ್ದಾ ಕೇಂದ್ರಗಳಾಗಿ ಬೆಳೆಯುತ್ತಿವೆ,” ಎಂದು ಹೇಳಿದರು.
ಎಂಎಲ್‌ಸಿ ಎಂ.ಎಲ್. ಅನಿಲ್ ಕುಮಾರ್ ಅವರು, “ನಾಗಲಾಪುರ ಮಠವು ಸಮಾಜಮುಖಿಯಾಗಿ ಎಲ್ಲ ಧರ್ಮಗಳನ್ನು ಸಮಾನತೆಯಿಂದ ಮುನ್ನಡೆಸುತ್ತಿದೆ. ಇದು ತುಮಕೂರು ಶ್ರೀ ಸಿದ್ದಗಂಗಾ ಮಠದ ಮಾದರಿಯಾಗಿ ಬೆಳೆಯಬೇಕು. ಮುಂದಿನ ದಿನಗಳಲ್ಲಿ ಮಠವು ಗುಣಮಟ್ಟದ ಶಿಕ್ಷಣ ನೀಡುವ ವಿದ್ಯಾಸಂಸ್ಥೆಯಾಗಿ ಬೆಳೆದು ಬರಬೇಕು,” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ನಾಗನಾಳ ಸೋಮಣ್ಣ, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ಮಂಗಮ್ಮ ಮುನಿಸ್ವಾಮಿ, ಸೂಲೂರು ಗ್ರಾಪಂ ಅಧ್ಯಕ್ಷ ಎಸ್. ಸುರೇಶ್, ಶರಣೆಯರ ಬಳಗದ ವಿಮಲ ಬೈಲಪ್ಪ, ರಾಜ್ಯ ಪ್ರಶಸ್ತಿ ಪುರಸ್ಕೃತ ಎನ್.ಆರ್. ಜ್ಞಾನಮೂರ್ತಿ, ಮುಖಂಡರಾದ ಕೆ.ಬಿ. ಬೈಲಪ್ಪ, ಮಂಜುನಾಥ್, ಶ್ರೀನಿವಾಸ್, ಮೈಲಾಂಡ್ಲಹಳ್ಳಿ ಮುರಳಿ, ಸಿ.ಎಂ.ಆರ್. ಶ್ರೀನಾಥ್, ಬಣಕನಹಳ್ಳಿ ನಟರಾಜ್, ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.