Magadi, Ramanagara : ಮಾಗಡಿ ತಾಲ್ಲೂಕು ಪಂಚಾಯಿತಿ (Taluk Panchayat) ಸಭಾಂಗಣದಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ಸಭೆಯ ಅಧ್ಯಕ್ಷತೆಯನ್ನು ಶಾಸಕ ಎ.ಮಂಜುನಾಥ್ ವಹಿಸಿಕೊಂಡಿದ್ದರು.
ಸರ್ಕಾರಿ ಭೂಮಿಯಲ್ಲಿ ಬಗರ್ ಹುಕುಂ ಸಾಗುವಳಿ ಮಾಡಿಕೊಂಡಿರುವ ತಾಲ್ಲೂಕಿನ SC, ST ಸಮುದಾಯಗಳಿಗೆ 30 ವರ್ಷಗಳಿಂದ ಭೂಮಿ ಮಂಜೂರು ಮಾಡಿಲ್ಲ. ಇನ್ನೂ 3 ತಿಂಗಳ ಒಳಗೆ ಅರ್ಹ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಿ, ಪಹಣಿಯಲ್ಲಿ ಅವರ ಹೆಸರು ಬರುವಂತೆ ಕೆಲಸ ಮಾಡುತ್ತೇವೆ. ಪುರಸಭೆಗೆ ₹10 ಕೋಟಿ ಅನುದಾನ ಮಂಜೂರಾಗಿದ್ದು ಅದರಲ್ಲಿ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಪಕ್ಕದಲ್ಲಿ ಇರುವ ನಿವೇಶನದಲ್ಲಿ ಡಾ.ಬಾಬು ಜಗಜೀವನ್ ರಾಮ್ ಭವನ ನಿರ್ಮಿಸಲು ಸಭೆಯಲ್ಲಿಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತಾನಾಡಿದ ಶಾಸಕರು “ಒಂದು ವರ್ಷದ ಒಳಗೆ ಮಾಗಡಿ ಪಟ್ಟಣದ ಪುರಸಭೆ ಕಚೇರಿ ಮುಂದೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಪುತ್ಥಳಿ ನಿರ್ಮಿಸಿ, ಮುಂದಿನ ವರ್ಷದ ಅಂಬೇಡ್ಕರ್ ಜಯಂತಿಯಂದು ಅನಾವರಣಗೊಳಿಸಲಾಗುವುದು. ತಾಲ್ಲೂಕಿನ ವಿಎಸ್ಎಸ್ಎನ್, ಟಿಎಪಿಸಿಎಂಎಸ್, ಪಿಎಲ್‌ಡಿ ಬ್ಯಾಂಕ್, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಷೇರು ನೀಡದೆ ಮೀಸಲಾತಿ ನಿಯಮ ಉಲ್ಲಂಘಿಸಲಾಗಿದ್ದು ಸಂವಿಧಾನದ ಆಶಯಗಳಂತೆ ಸಹಕಾರ ರಂಗದಲ್ಲಿ ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಎಂಬಂತೆ ಷೇರು ನೀಡಲು ಒಂದು ತಿಂಗಳಲ್ಲಿ ಸಹಕಾರ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸಹಕಾರಿ ಸಂಘಗಳ ಕಾರ್ಯದರ್ಶಿಗಳ ಸಭೆ ಕರೆದು ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ”ಎಂದು ತಿಳಿಸಿದರು.
ಸಭೆಯಲ್ಲಿ ತಾ.ಪಂ.ಮಾಜಿ ಸದಸ್ಯ ಸಿ.ಜಯರಾಮ್, ತಾ.ಪಂ.ಮಾಜಿ ಅಧ್ಯಕ್ಷ ಜಿ.ಕೃಷ್ಣ, ಕಲ್ಕೆರೆ ಶಿವಣ್ಣ, ದೊಡ್ಡಿಲಕ್ಷ್ಮಣ್, ಮುಖಂಡ ಗೋಪಾಲ್, ತೊರೆರಾಮನಹಳ್ಳಿ ನರಸಿಂಹಮೂರ್ತಿ, ತಾ.ಪಂ.ಮಾಜಿ ಸದಸ್ಯ ಎಂ.ಜಿ.ನರಸಿಂಹಮೂರ್ತಿ, ಜಗಜೀವನ್‌ರಾಮ್ ನಗರದ ಶ್ರೀನಿವಾಸ್, ವೆಂಕಟರಮಣಪ್ಪ, ವೆಂಕಟೇಶ್, ತಿರುಮಲೆ ಆಂಜನಪ್ಪ, ಬ್ಯಾಲಕೆರೆ ಚಿಕ್ಕರಾಜು, ಧನಂಜಯ ನಾಯ್ಕ್, ಗಂಗಹನುಮಯ್ಯ, ಚಿಕ್ಕಣ್ಣ, ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ ಪ್ರಸಾದ್, ತಾ.ಪಂ.ಇಒ ಟಿ.ಪ್ರದೀಪ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ.ಕಾಂತರಾಜ್, ಸಿಪಿಐ ರವಿ ಬೆಳವಂಗಲ ಉಪಸ್ಥಿತರಿದ್ದರು.