
Prayagraj: ಮಹಾಕುಂಭ ಮೇಳಕ್ಕೆ (Mahakumbh Mela) ಇಂದು ತೆರೆ ಬೀಳಲಿದ್ದು, ಶಿವರಾತ್ರಿಯ ವಿಶೇಷ ದಿನದ ಕಾರಣ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ನೆರೆದಿದ್ದಾರೆ. ಮೇಳದ ಅಧಿಕೃತ ಮುಕ್ತಾಯವಾದರೂ, ಶಾಹಿ ಸ್ನಾನಕ್ಕೆ ಮೇ 15ರವರೆಗೆ ಅವಕಾಶವಿದೆ.
ಈ ಮೇಳವು 144 ವರ್ಷಕ್ಕೊಮ್ಮೆ ನಡೆಯುವ ಅಪರೂಪದ ಧಾರ್ಮಿಕ ಘಟನೆಯಾಗಿದ್ದು, ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಸಾಮಾನ್ಯ ಕುಂಭಮೇಳಕ್ಕಿಂತ ವಿಶೇಷ. ಸಾಧು-ಸಂತರು, ತಪಸ್ವಿಗಳು, ಹಾಗೂ ಭಕ್ತಾದಿಗಳು ಈ ಪವಿತ್ರ ಯಾತ್ರೆಯಲ್ಲಿ ಭಾಗವಹಿಸುತ್ತಾರೆ.
ಮಹಾಕುಂಭ ಮುಕ್ತಾಯವಾದರೂ, ಶಾಹಿ ಸ್ನಾನ ಮುಂದುವರಿಯಲಿದೆ. ವೃಷಭ ರಾಶಿಯಲ್ಲಿರುವ ಗುರು ಗ್ರಹದ ಅವಧಿಯವರೆಗೆ ಪುಣ್ಯ ಸ್ನಾನವು ವಿಶೇಷ ಫಲ ನೀಡುತ್ತದೆ. ಮೇ 15ರೊಳಗಾಗಿ ಚಿತ್ರಾ ಪೌರ್ಣಮಿ, ವಸಂತ ಪೌರ್ಣಮಿ, ಅಮಾವಾಸ್ಯೆ ಮುಂತಾದ ಪುಣ್ಯ ದಿನಗಳಲ್ಲಿ ಸ್ನಾನ ಮಾಡಬಹುದು.
ಮಹಾಕುಂಭ ಮೇಳ ಶತಮಾನದಲ್ಲಿ ಒಮ್ಮೆ ಬರುವ ಅದೃಷ್ಟಯೋಗ. ಈ ವೇಳೆ ಸಂತರು, ತಪಸ್ವಿಗಳು ತಮ್ಮ ಧ್ಯಾನ-ಸಾಧನೆಗಳಿಗೆ ಮುಂದಾಗುತ್ತಾರೆ. ಭಕ್ತರು ಅವರ ತಪಸ್ಸಿಗೆ ಅಡ್ಡಿಯಾಗದೆ, ಸಂಯಮದಿಂದ ಪವಿತ್ರ ಸ್ನಾನ ಮುಗಿಸಿಕೊಳ್ಳಬೇಕು.
ಹಿಂದಿನ ಕಾಲದಲ್ಲಿ ಮಹಾಕುಂಭ ಮೇಳಕ್ಕೆ ತಲುಪುವುದು ಕಷ್ಟವಾಗಿದ್ದರೆ, ಇಂದು ಸಾರಿಗೆ ಮತ್ತು ತಂತ್ರಜ್ಞಾನ ಪ್ರಗತಿಯ ಫಲವಾಗಿ ಸುಲಭವಾಗಿದೆ. ಆದ್ದರಿಂದ, ಈ ಅಪರೂಪದ ಅವಕಾಶವನ್ನು ಬಳಸಿಕೊಂಡು, ಮೇ 15ರೊಳಗಾಗಿ ಮಹಾಕುಂಭ ಮೇಳಕ್ಕೆ ತೆರಳಿ ಪುಣ್ಯ ಸ್ನಾನ ಮಾಡಬಹುದು ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.