ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ (Mahakumbh) ತಡರಾತ್ರಿ ಸಂಭವಿಸಿದ ಕಾಲ್ತುಳಿತದಿಂದ ಹಲವರು ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಕುಂಭಮೇಳದ ಪರಿಸ್ಥಿತಿಯನ್ನು ನಿಗಾ ವಹಿಸಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿ ಮಾಹಿತಿ ಪಡೆದಿದ್ದಾರೆ.
ಪ್ರಧಾನಿ ಮೋದಿ ಅವರು ಈ ಸಂಬಂಧ ಮುಖ್ಯಮಂತ್ರಿಯೊಂದಿಗೆ ಎರಡು ಬಾರಿ ದೂರವಾಣಿಯಲ್ಲಿ ಚರ್ಚಿಸಿ, ಪರಿಸ್ಥಿತಿಯ ಅವಲೋಕನೆ ನಡೆಸಿದ್ದಾರೆ. ಕುಂಭಮೇಳದ ವ್ಯವಸ್ಥೆಗಳ ಬಗ್ಗೆ ಅವರು ತೀವ್ರ ಗಮನ ಹರಿಸಿದ್ದಾರೆ. ಈ ಸಂದರ್ಭ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಯೋಗಿ ಆದಿತ್ಯನಾಥ್ ಅವರೊಂದಿಗೆ ಸಂಪರ್ಕ ಸಾಧಿಸಿ, ರಾಜ್ಯ ಸರ್ಕಾರಕ್ಕೆ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಕ್ತರಿಗೆ ಸಂದೇಶ ನೀಡಿದ್ದು, ಅವರು ಸಂಗಮದ ಮಧ್ಯ ಭಾಗಕ್ಕೆ ಹೋಗದೆ ಹತ್ತಿರದ ಘಾಟ್‌ಗಳಲ್ಲಿ ಸ್ನಾನ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಆಡಳಿತ ನೀಡಿದ ಸೂಚನೆಗಳನ್ನು ಪಾಲಿಸಲು ಹಾಗೂ ಯಾವುದೇ ವದಂತಿಗಳನ್ನು ನಂಬದಿರಲು ಭಕ್ತರಿಗೆ ಸಲಹೆ ನೀಡಿದರು.
ಮೌನಿ ಅಮಾವಾಸ್ಯೆಗೆಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಜನಜಂಗುಳಿ ಹೆಚ್ಚಾಗಿ ಕಾಲ್ತುಳಿತ ಸಂಭವಿಸಿದೆ. ಪ್ರಯಾಗರಾಜ್‌ನ ಸಂಗಮ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ 13 ಅಖಾರಾಗಳ ಅಮೃತ ಸ್ನಾನವನ್ನು ರದ್ದುಗೊಳಿಸಲಾಗಿದೆ. ಕೆಲವರ ಸಾವಿನ ಸುದ್ದಿ ಕೇಳಿಬರುತ್ತಿದ್ದರೂ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.