Jammu: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಮಾತಾ ವೈಷ್ಣೋ ದೇವಿ ದೇಗುಲದಲ್ಲಿ (Mata Vaishno Devi Temple) ಭಕ್ತಾದಿಗಳ ನೂಕುನುಗ್ಗಲಿನಿಂದಾದ ಕಾಲ್ತುಳಿತದಲ್ಲಿ (Stampede) 12 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು ಹನ್ನೆರಡಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ತ್ರಿಕೂಟ ಬೆಟ್ಟದ ಗರ್ಭಗುಡಿಯ ಹೊರಭಾಗದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಹೊಸ ವರ್ಷದ ಆರಂಭವನ್ನು ಸ್ವಾಗತಿಸಲು ಅಪಾರ ಸಂಖ್ಯೆಯ ಭಕ್ತರು ವೈಷ್ಣೋ ದೇವಿ ದರ್ಶನಕ್ಕೆ ಬಂದಿದ್ದರು. ದೇವಿಯ ದರ್ಶನಕ್ಕೆ ಭವನವನ್ನು ಪ್ರವೇಶಿಸಿದಾಗ ಕಾಲ್ತುಳಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಣಹಾನಿಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದು, “ಜಮ್ಮು ಮತ್ತು ಕಾಶ್ಮೀರ ಎಲ್‌ಜಿ ಮನೋಜ್ ಸಿನ್ಹಾ, ಸಚಿವರಾದ ಜಿತೇಂದ್ರ ಸಿಂಗ್ ಮತ್ತು ನಿತ್ಯಾನಂದ ರೈ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ” ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದ್ದರೆ, ಕಾಲ್ತುಳಿತದಿಂದ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತಲಾ ರೂ.10 ಲಕ್ಷ ಮತ್ತು ಗಾಯಗೊಂಡವರಿಗೆ ರೂ.2 ಲಕ್ಷ ಪರಿಹಾರ ನೀಡಲಾಗುವುದು ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ದೇಗುಲ ಮಂಡಳಿ ಭರಿಸಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗ್ವರ್ನ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.
Image: ANI