
ಮೆಟ್ರೋ (Metro) ದರ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. 2017ರ ನಂತರ ಮೊದಲ ಬಾರಿ ಮೆಟ್ರೋ ದರ ಹೆಚ್ಚಳ ಮಾಡಿದ್ದು, ಫೆಬ್ರವರಿ 9ರಿಂದಲೇ ಹೊಸ ದರ ಜಾರಿಗೆ ಬಂದಿದೆ.
ಜನವರಿಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದರೆ, ಫೆಬ್ರವರಿಯ ಎರಡನೇ ವಾರದಲ್ಲಿ ದರ ಪರಿಷ್ಕರಣೆ ನಂತರವೂ ಸರಾಸರಿ ಶೇ. 13 ರಷ್ಟು ಇಳಿಕೆ ಕಂಡುಬಂದಿದೆ. ಫೆಬ್ರವರಿ 9ರ ಮೊದಲು ಪ್ರತಿದಿನ 8.2 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರೆ, ಇದೀಗ ಇದು 7.1 ಲಕ್ಷಕ್ಕೆ ಕುಸಿಯಿತು.
ಜನವರಿಯಲ್ಲಿ 2.5 ಕೋಟಿ ಜನ ಮೆಟ್ರೋ ಬಳಸಿದ್ದರೆ, ಫೆಬ್ರವರಿಯಲ್ಲಿ ಈ ಸಂಖ್ಯೆ 2 ಕೋಟಿ ಕ್ಕೆ ಇಳಿದಿದೆ, ಇದರಿಂದ ಶೇ. 20 ರಷ್ಟು ಕುಸಿತವಾಗಿರುವುದು ಬಿಎಂಆರ್ಸಿಎಲ್ ಅಂಕಿ-ಅಂಶಗಳಿಂದ ದೃಢಪಟ್ಟಿದೆ. ಸರಾಸರಿ ದರ ಶೇ. 46 ಹೆಚ್ಚಳವಾಗಿದೆ, ಆದರೆ ಕೆಲವು ಮಾರ್ಗಗಳಲ್ಲಿ ಇದು ಶೇ. 110 ರಷ್ಟು ಹೆಚ್ಚಾಗಿರುವುದಾಗಿ ಪ್ರಯಾಣಿಕರು ಆರೋಪಿಸಿದ್ದಾರೆ.
ಮೆಟ್ರೋ ದರ ಏರಿಕೆಯಿಂದ ವಿದ್ಯಾರ್ಥಿಗಳು ತುಂಬಾ ತೊಂದರೆಗೆ ಒಳಗಾಗಿದ್ದು, ತಿಂಗಳಿಗೆ 3,500 ರೂ. ಪಾವತಿಸಲು ಪೋಷಕರು ತೊಂದರೆಗೆ ಸಿಲುಕುತ್ತಿದ್ದಾರೆ. ದೂರ ಪ್ರಯಾಣಿಸುವವರು ಬಿಎಂಟಿಸಿ ಬಸ್ ಅಥವಾ ಖಾಸಗಿ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.
ಮೆಟ್ರೋ ದರ ಏರಿಕೆಯಿಂದಾಗಿ ಜನರು ಬಿಎಂಟಿಸಿ ಬಳಕೆ ಹೆಚ್ಚಿಸಿದ್ದಾರೆ. ಫೆಬ್ರವರಿ 3 ರಂದು ಬಿಎಂಟಿಸಿ ಪ್ರಯಾಣಿಕರು 36.62 ಲಕ್ಷ ಜನರಾಗಿದ್ದರೆ, ಫೆಬ್ರವರಿ 10 ರಂದು ಇದು 37.22 ಲಕ್ಷಕ್ಕೆ ಏರಿಕೆಯಾಗಿದೆ.
ಸರಕಾರ ಜನರ ಅನುಕೂಲತೆಗಾಗಿ ಮೆಟ್ರೋ ಪ್ರಾರಂಭಿಸಿದರೂ, ಈಗ ದರ ಏರಿಕೆಯಿಂದ ಜನರು ಬೇಸತ್ತು ಬೇರೇ ಮಾರ್ಗಗಳತ್ತ ತಿರುಗುತ್ತಿದ್ದಾರೆ. ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಈ ದರ ಪರಿಷ್ಕರಣೆ ಬಗ್ಗೆ ಮರುಪರಿಶೀಲನೆ ಮಾಡುತ್ತದೆಯೇ ಎಂಬುದರ ಬಗ್ಗೆ ಉತ್ತರ ನೀಡಿಲ್ಲ.
ಮೆಟ್ರೋ ಉದ್ಧೇಶವೇ ಜನರಿಗೆ ಸುಲಭ ಪ್ರಯಾಣ ನೀಡುವುದು, ಆದರೆ ಈಗ ದುಬಾರಿ ದರದಿಂದ ಜನರು ಹಿಂದೇಟು ಹಾಕುತ್ತಿದ್ದಾರೆ. ಖಾಲಿ ಸೀಟುಗಳು ಹೆಚ್ಚಾಗಿರುವುದು ಈ ದರ ಏರಿಕೆಯ ಪರಿಣಾಮವೆಂದರೆ ತಪ್ಪಾಗಲಾರದು. ಜನರು ಮೆಟ್ರೋ ಬದಲಿಗೆ ಬಿಎಂಟಿಸಿ ಅಥವಾ ಖಾಸಗಿ ವಾಹನಗಳನ್ನು ಆರಿಸಿಕೊಳ್ಳುತ್ತಿರುವುದು ಈ ನಿರ್ಧಾರದ ಪ್ರಭಾವ ಸ್ಪಷ್ಟಪಡಿಸುತ್ತಿದೆ.