Bengaluru: ಬಲವಂತವಾಗಿ ಸಾಲ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ (Microfinance harassment) ಕಂಪನಿಯ ಸಿಬ್ಬಂದಿಯ ವಿರುದ್ಧದ ಶಿಕ್ಷೆಯ ಅವಧಿಯನ್ನು 3 ವರ್ಷದಿಂದ 10 ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ (Home Minister G. Parameshwara) ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಿರುಕುಳ ನೀಡಿದವರಿಗೆ 3 ವರ್ಷ ಶಿಕ್ಷೆ ಇತ್ತು. ಈಗ ಅದನ್ನು 10 ವರ್ಷಕ್ಕೆ ಹೆಚ್ಚಿಸಲಾಗಿದೆ. ದಂಡವನ್ನು ಕೂಡಾ 5 ಲಕ್ಷ ರೂ. ಮಾಡಿದ್ದೇವೆ. ಕಾನೂನಿನ ಬಿಸಿ ತಟ್ಟಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇವೆ,” ಎಂದರು.
ಕಾಟಾಚಾರ ತಡೆಗಟ್ಟಲು ಕಾನೂನು ಮಾಡಿದರೆ ಮಾತ್ರ ಸಾಕಾಗುವುದಿಲ್ಲ. ಆದ್ದರಿಂದ ಶಿಕ್ಷೆ ಹಾಗೂ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. “ಈ ಕಠಿಣ ಕಾನೂನಿನಿಂದ ಕಿರುಕುಳ ಪ್ರಕರಣಗಳು ಕಡಿಮೆಯಾಗುವ ನಿರೀಕ್ಷೆ ಇದೆ,” ಎಂದು ಹೇಳಿದರು.
ರಾಜ್ಯಪಾಲರಿಗೆ ಈ ಸಂಬಂಧ ಬಿಲ್ ಕಳುಹಿಸಲಾಗಿದೆ. “ರಾಜ್ಯಪಾಲರು ಊರಿಗೆ ಹೋಗಿದ್ದಾರೆ. ಅವರು ಬಂದ ಕೂಡಲೇ ಸಹಿ ಮಾಡಿದರೆ, ಸುಗ್ರೀವಾಜ್ಞೆ ಜಾರಿಗೆ ಬರಲಿದೆ,” ಎಂದು ಗೃಹ ಸಚಿವರು ತಿಳಿಸಿದರು.