
Bengaluru: ಮೈಕ್ರೋಸಾಫ್ಟ್ ಮೆಯೋರಾನಾ 1 (Microsoft’s Mayorana 1) ಎನ್ನುವ ಹೊಸ ಕ್ವಾಂಟಂ (quantum) ಚಿಪ್ ಬಿಡುಗಡೆ ಮಾಡಿದ್ದು, ಇದರಿಂದ ಹೊಸ ತಂತ್ರಜ್ಞಾನ ಕ್ರಾಂತಿ ಸಾಧ್ಯ ಎಂದು ಸಂಸ್ಥೆ ಹೇಳಿದೆ. ಘನ, ದ್ರವ, ಅನಿಲದ ಹೊರತಾಗಿಯೂ ಹೊಸ ದ್ರವ್ಯ ಸ್ಥಿತಿ ಟೋಪೋಕಂಡಕ್ಟರ್ (Topoconductor) ಅನ್ನು ತಾವು ನಿರ್ಮಿಸಿದ್ದೇವೆ ಎಂದು ಮೈಕ್ರೋಸಾಫ್ಟ್ ಘೋಷಿಸಿದೆ.
ಟೋಪೋಕಂಡಕ್ಟರ್ ಬಳಸಿ ನಿರ್ಮಿತ ಮೆಯೋರಾನಾ 1 ವಿಶ್ವದ ಮೊದಲ ಕ್ವಾಂಟಂ ಪ್ರೊಸೆಸಿಂಗ್ ಯುನಿಟ್ ಆಗಿದೆ. ಈ ಚಿಪ್ ಸಾಮಾನ್ಯ ಕಂಪ್ಯೂಟರ್‌ಗಳಿಗೆ ಸಾಧ್ಯವಿಲ್ಲದ ಜಟಿಲ ಗಣನೆಗಳನ್ನು ಸುಲಭವಾಗಿ ಮಾಡಬಲ್ಲ ಶಕ್ತಿ ಹೊಂದಿದೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಈ ಮಹತ್ವದ ಆವಿಷ್ಕಾರವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಟೋಪೋಕಂಡಕ್ಟರ್ ಎಂಬುದು ಮೆಯೋರಾನಾ ಕಣಗಳನ್ನು ನಿಯಂತ್ರಿಸಿ, ಕ್ಯೂಬಿಟ್ (Quantum Bit) ಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ. ಸಾಮಾನ್ಯ ಕಂಪ್ಯೂಟರ್‌ಗಳಲ್ಲಿ ಬಿಟ್ (0 ಅಥವಾ 1) ಅಸ್ತಿತ್ವದಲ್ಲಿರುವಂತೆ, ಕ್ವಾಂಟಂ ಕಂಪ್ಯೂಟಿಂಗ್‌ನಲ್ಲಿ “ಕ್ಯೂಬಿಟ್” ಎಂಬುದೇ ಗಣನೆಗೆ ಬಳಸುವ ಮೂಲ ಘಟಕ. ಟೋಪೋಕಂಡಕ್ಟರ್ ಬಳಸಿದ ಕ್ಯೂಬಿಟ್ ಅತಿ ಚಿಕ್ಕದಾದರೂ, ಅತಿ ವೇಗವಾಗಿರುತ್ತದೆ.
ಮೆಯೋರಾನಾ 1 ಭವಿಷ್ಯದ ತಂತ್ರಜ್ಞಾನ
ಮೈಕ್ರೋಸಾಫ್ಟ್ ಪ್ರಕಾರ, ಕ್ವಾಂಟಂ ಕಂಪ್ಯೂಟರ್ ನಿರ್ಮಿಸಲು ದಶಕಗಳೇ ಬೇಕೆಂಬ ಭಾವನೆ ತಪ್ಪು. ಈ ಹೊಸ ಚಿಪ್ ಕೆಲವೇ ವರ್ಷಗಳಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂದು ನಾದೆಲ್ಲಾ ಅಭಿಪ್ರಾಯಪಟ್ಟಿದ್ದಾರೆ. “ಈ ಚಿಪ್ ಭೂಮಿಯ ಎಲ್ಲ ಕಂಪ್ಯೂಟರ್‌ಗಳನ್ನು ಸೇರಿಸಿದರೂ ಸಾಧ್ಯವಾಗದ ಕೆಲಸಗಳನ್ನು ಮಾಡಬಲ್ಲದು” ಎಂದು ಅವರು ವಿವರಿಸಿದ್ದಾರೆ.
ಎಕ್ಸ್ ಪ್ಲಾಟ್‌ಫಾರ್ಮ್ ಮುಖ್ಯಸ್ಥ ಇಲಾನ್ ಮಸ್ಕ್ ಈ ಆವಿಷ್ಕಾರವನ್ನು ಸ್ವಾಗತಿಸಿ, “ಕ್ವಾಂಟಂ ಕಂಪ್ಯೂಟಿಂಗ್‌ನಲ್ಲಿ ಇನ್ನಷ್ಟು ಮಹತ್ವದ ಆವಿಷ್ಕಾರಗಳು ನಡೆಯಲಿವೆ” ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸತ್ಯ ನಾದೆಲ್ಲಾ, “ಇದು ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರದ ಟ್ರಾನ್ಸಿಸ್ಟರ್ ಕ್ಷಣ” ಎಂದು ಪ್ರತಿಕ್ರಿಯಿಸಿದ್ದಾರೆ.