
ತಮಿಳು ಚಿತ್ರರಂಗದ ಪ್ರಸಿದ್ಧ ನಟ ಶಿವಕಾರ್ತಿಕೇಯನ್, (Sivakarthikeyan) ಸದ್ಯ ಎ.ಆರ್. ಮುರುಗದಾಸ್ ನಿರ್ದೇಶನದ ಮದರಾಸಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಿಜು ಮೆನನ್, ವಿದ್ಯುತ್ ಜಮಾಲ್, ವಿಕ್ರಾಂತ್ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದರೆ, ಶ್ರೀ ಲಕ್ಷ್ಮಿ ಮೂವೀಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.
ಮೂಲತಃ ಈ ಚಿತ್ರಕ್ಕೆ ಹಂಟರ್ ಎಂಬ ಟೈಟಲ್ ಇಡಲು ನಿರ್ಧಾರ ಮಾಡಲಾಗಿತ್ತು. ಆದರೆ, ಹಂಟರ್ ಶೀರ್ಷಿಕೆ ಸೂಪರ್ಸ್ಟಾರ್ ರಜನಿಕಾಂತ್ ಅವರ ವೆಟ್ಟೈಯನ್ ಚಿತ್ರಕ್ಕೆ ಹೊಂದುವ ಕಾರಣ, ಶಿವಕಾರ್ತಿಕೇಯನ್ ಅದನ್ನು ತಿರಸ್ಕರಿಸಿದರು. ರಜನಿಕಾಂತ್ ಅವರ ಕಟ್ಟಾ ಅಭಿಮಾನಿಯಾಗಿರುವ ಶಿವಕಾರ್ತಿಕೇಯನ್, ತಮ್ಮ ಆದರ್ಶ ನಟನಿಗೆ ಗೌರವ ತೋರಿಸುವ ನಿಟ್ಟಿನಲ್ಲಿ ಹೆಸರನ್ನು ಮದರಾಸಿ (Madarasi) ಎಂದು ಬದಲಾಯಿಸಲು ಕೇಳಿಕೊಂಡರು.
ಇದೇ ಸಂದರ್ಭದಲ್ಲಿ, ಶಿವಕಾರ್ತಿಕೇಯನ್ ನಟನೆಯ ಪರಶಕ್ತಿ ಚಿತ್ರವೂ ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧವಾಗಿದೆ. ಸುಧಾ ಕೊಂಗರಾ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಲೀಲಾ, ಅಥರ್ವ ಹಾಗೂ ರವಿ ಮೋಹನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡುತ್ತಿದ್ದಾರೆ.
ಇತ್ತೀಚೆಗೆ, ಶಿವಕಾರ್ತಿಕೇಯನ್ ಅಭಿನಯದ ಅಮರನ್ ಚಿತ್ರವು ಬಾಕ್ಸಾಫೀಸ್ ನಲ್ಲಿ 300 ಕೋಟಿ ರೂ.ಗಳಷ್ಟು ಭಾರೀ ಗಳಿಕೆ ಮಾಡಿ ಗಮನ ಸೆಳೆದಿತ್ತು. ಕಮಲ್ ಹಾಸನ್ ನಿರ್ಮಿಸಿರುವ ಈ ಚಿತ್ರ, ಮೇಜರ್ ಮುಕುಂದ್ ವರದರಾಜನ್ ಅವರ ಜೀವನಾಧಾರಿತ ಕಥೆಯಾಗಿದೆ. ಇದರಲ್ಲಿ ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಿವಕಾರ್ತಿಕೇಯನ್ ಅವರ ಮುಂದಿನ ಸಿನಿಮಾಗಳಿಗೂ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ!