Bengaluru: ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಚಾಲಕರು ಹಾಗೂ ಸವಾರರು ರಸ್ತೆ ಗುಂಡಿಗಳಿಂದಾಗಿ ತೊಂದರೆಗೆ ಸಿಲುಕೋದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ಟೆಕ್ಕಿಯೊಬ್ಬರು ಹೊಸ ಪ್ರಯತ್ನಕ್ಕೆಕೈ ಹಾಕಿದ್ದಾರೆ.
ಬಳಕೆದಾರ ಸ್ನೇಹಿಯಾದ ಮೊಬೈಲ್ ಆಪ್ (Mobile app) ಒಂದನ್ನು ಅವರು ಸಿದ್ದಪಡಿಸಲು ಮುಂದಾಗಿದ್ದು, ವಾಹನ ಚಾಲಕರು ಹಾಗೂ ಸವಾರರು ತಾವು ಪ್ರಯಾಣಿಸುವ ರಸ್ತೆಯಲ್ಲಿ ಗುಂಡಿಗಳು ಎಷ್ಟಿವೆ? ಎಲ್ಲಿವೆ? ರಸ್ತೆಯ ಗುಣ ಮಟ್ಟ ಹೇಗಿದೆ ಎಂದು ವರದಿ ಮಾಡಬಹುದಾಗಿದೆ!
Fyle ಎಂಬ ಸಾಫ್ಟ್‌ವೇರ್ (software) ಸಂಸ್ಥೆಯ CTO ಹಾಗೂ ಸಹ ಸಂಸ್ಥಾಪಕರಾಗಿರುವ ಶಿವರಾಮಕೃಷ್ಣನ್ ನಾರಾಯಣನ್ (Sivaramakrishnan Narayanan) ಅವರು ಈ ಕುರಿತಾಗಿ ಟ್ವೀಟ್ ಮಾಡಿದ್ದು, ತಮ್ಮ ಈ ಹೊಸ ಪ್ರಯತ್ನಕ್ಕೆ ಕೈ ಜೋಡಿಸುವಂತೆ ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಖಾತೆ Xನಲ್ಲಿ ಅವರು ನೀಡಿರುವ ಮಾಹಿತಿ, ‘ನಾನು ಒಂದು ಮೊಬೈಲ್ ಆಪ್ ನಿರ್ಮಿಸಲು ತೀರ್ಮಾನಿಸಿದ್ದೇನೆ. ಈ ಆಪ್ ಮೂಲಕ ಬೆಂಗಳೂರು ನಗರದಲ್ಲಿ ಇರುವ ರಸ್ತೆ ಗುಂಡಿಗಳನ್ನು ಗುರ್ತಿಸಲು ಹಾಗೂ ಅವುಗಳ ಬಗ್ಗೆ ಮಾಹಿತಿ ನೀಡಲು ನೆರವಾಗುತ್ತದೆ.
ನಾನು ಇತ್ತೀಚೆಗೆ ಗಮನಿಸಿರುವ ಪ್ರಕಾರ ಬೆಂಗಳೂರಿನಲ್ಲಿ 7 ಸ್ಟಾರ್ ರಸ್ತೆ ಗುಂಡಿಗಳು ಇವೆ! ಆದರೆ, ಇದನ್ನು ಯಾರೂ ಗುರ್ತಿಸುತ್ತಿಲ್ಲ, ಇವುಗಳನ್ನು ಸರಿಪಡಿಸುತ್ತಿಲ್ಲ. ಸರ್ಕಾರದ ಗಮನಕ್ಕೂ ಯಾರೂ ತರುತ್ತಿಲ್ಲ. ನಾವು ಆಪ್ ಮೂಲಕ ರಸ್ತೆ ಗುಂಡಿಗಳನ್ನು ಗುರ್ತಿಸಿ ಅದನ್ನು ವಾಹನ ಸವಾರರು, ಚಾಲಕರು ಹಾಗೂ ಸರ್ಕಾರದ ಗಮನಕ್ಕೆ ತರಬೇಕು. ಇದಕ್ಕಿಂತ ಹೆಚ್ಚಿನದು ಏನು ಮಾಡಲು ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
ಶಿವರಾಮ ಕೃಷ್ಣನ್ ಅವರ ಈ ಪೋಸ್ಟ್ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ತಮಾಷೆಯ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ. ಬಹುತೇಕರು ಇದೊಂದು ಅತ್ಯದ್ಭುತ ಐಡಿಯಾ ಎಂದೂ ಹೊಗಳಿದ್ದಾರೆ.
ಯಾವ ರಸ್ತೆ ಗುಂಡಿ ಎಷ್ಟು ತೀವ್ರವಾಗಿದೆ. ವಾಹನಗಳ ಚಕ್ರಗಳನ್ನೇ ಹಾನಿ ಮಾಡುವಂಥಾ ಗುಂಡಿಗಳು ಯಾವುವು? ಅವು ಎಷ್ಟಿವೆ? ಎಲ್ಲಿವೆ? ಹೀಗೆ ನಿರ್ದಿಷ್ಟ ಮಾಹಿತಿಗಳನ್ನೂ ನೀಡಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.
ರಸ್ತೆ ಗುಂಡಿಯ ಗಾತ್ರ, ಆಳ, ಅಗಲ, ಪ್ರಯಾಣಿಕರಿಗೆ ಎದುರಾಗಬಹುದಾದ ಸಮಸ್ಯೆ.. ಈ ಎಲ್ಲಾ ಮಾಹಿತಿಗಳನ್ನೂ ಜಿಯೋ ಲೊಕೇಷನ್ ಸಮೇತ ಒದಗಿಸಿದರೆ ಅಂಥಾ ರಸ್ತೆಗಳಲ್ಲಿ ಹುಷಾರಾಗಿ ವಾಹನ ಚಾಲನೆ ಮಾಡಲು ನೆರವಾಗುತ್ತದೆ ಎಂದು ಕೆಲವರು ಮಾಹಿತಿ ನೀಡಿದ್ಧಾರೆ.