ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah)ಹಾಗೂ ಅವರ ಪತ್ನಿ ಪಾರ್ವತಿ ವಿರುದ್ಧದ ಮುಡಾ ಹಗರಣದ (Muda case) ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಮೈಸೂರು ಲೋಕಾಯುಕ್ತ ಪೊಲೀಸರು ಈ ಕುರಿತು ಸಾಕ್ಷಿ ಪರಿಶೀಲನೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಅಂತಿಮ ವರದಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಎ1 ಸಿದ್ದರಾಮಯ್ಯ, ಎ2 ಪಾರ್ವತಿ, ಎ3 ಮಲ್ಲಿಕಾರ್ಜುನ, ಎ4 ದೇವರಾಜು ಸೇರಿದಂತೆ ಹಲವರ ವಿಚಾರಣೆ ನಡೆಯಿತು. ಸಂಗ್ರಹಿಸಿದ ಸಾಕ್ಷಿಗಳ ಆಧಾರದ ಮೇಲೆ ಫೈನಲ್ ರಿಪೋರ್ಟ್ (FR) ಸಿದ್ಧಗೊಳ್ಳುತ್ತಿದೆ.
ಇನ್ನು ಎರಡು ಮೂರು ದಿನಗಳಲ್ಲಿ ಅಂತಿಮ ವರದಿ ಮುಗಿದ ಬಳಿಕ, ಮೈಸೂರು ಲೋಕಾಯುಕ್ತ ಎಸ್ಪಿ ಇದನ್ನು ಐಜಿಪಿ ಸುಬ್ರಮಣೇಶ್ವರ ರಾವ್ ಅವರಿಗೆ ಸಲ್ಲಿಸಲಿದ್ದಾರೆ. ನಂತರ ಎಡಿಜಿಪಿಗೆ ವರದಿ ನೀಡಲಾಗಿ, ಕಾನೂನು ಸಲಹೆಯ ನಂತರ ನ್ಯಾಯಾಲಯಕ್ಕೆ ಸಲ್ಲಿಕೆ ನಡೆಯಲಿದೆ.
ಇದೀಗ ಇಡಿ (ED) ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್‌ಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದೆ. ಆದರೆ, ಹೈಕೋರ್ಟ್ ಮೊರೆ ಹೋದ ಹಿನ್ನಲೆಯಲ್ಲಿ ತಾತ್ಕಾಲಿಕ ತಡೆ ನೀಡಿದ್ದು, ಮುಂದಿನ ವಿಚಾರಣೆ ಫೆಬ್ರವರಿ 10ಕ್ಕೆ ನಿಗದಿಯಾಗಿದೆ. ಮುಂದಿನ ಬೆಳವಣಿಗೆಗೆ ಕಾದು ನೋಡಬೇಕಾಗಿದೆ.