Bengaluru: ಮುಡಾ (MUDA Case) ಹಗರಣದ ಕುಣಿಕೆ ಸಿಎಂ ಸಿದ್ದರಾಮಯ್ಯಗೆ (CM Siddaramaiah) ಬಿಗಿಯಾಗುತ್ತಿರುವ ಬೆನ್ನಲ್ಲೇ ಅವರ ಪತ್ನಿ ಪಾರ್ವತಿ (Parvathy) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (Mysore Urban Development Authority) ಪಡೆದ ಸೈಟುಗಳನ್ನು ವಾಪಸ್ ನೀಡುವ ನಿರ್ಧಾರ ಕೈಗೊಂಡಿದ್ದಾರೆ.
“ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (Mysore Urban Development Authority) ನನ್ನ ಪರವಾಗಿ ಕಾರ್ಯಗತಗೊಳಿಸಿದ 14 ನಿವೇಶನಗಳ ಕ್ರಯಪತ್ರಗಳನ್ನು ರದ್ದುಗೊಳಿಸುವ ಮೂಲಕ ನಾನು ಪರಿಹಾರದ ನಿವೇಶನಗಳನ್ನು ಒಪ್ಪಿಸಲು ಮತ್ತು ಹಿಂದಿರುಗಿಸಲು ಬಯಸುತ್ತೇನೆ. ನಿವೇಶನಗಳ ಸ್ವಾಧೀನವನ್ನು ಸಹ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮರಳಿ ಹಸ್ತಾಂತರಿಸುತ್ತಿದ್ದೇನೆ. ದಯವಿಟ್ಟು ಈ ನಿಟ್ಟಿನಲ್ಲಿ ಆದಷ್ಟು ಬೇಗ ಅಗತ್ಯ ಕ್ರಮಗಳನ್ನು ಕೈಗೊಳ್ಳಿ,” ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಆರ್ ಅಶೋಕ್, (R Ashok) ಸಂವಿಧಾನ ರಕ್ಷಿಸಲು ದಿಟ್ಟ ನಿರ್ಧಾರ ಕೈಗೊಂಡ ರಾಜ್ಯಪಾಲರಿಗೆ ಸಿಕ್ಕ ದೊಡ್ಡ ಜಯ ಎಂದು ಬಣ್ಣಿಸಿದ್ದಾರೆ.
ಈ ವಿಚಾರವಾಗಿ ಸೋಮವಾರ ರಾತ್ರಿ ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದ ಅಶೋಕ್, ‘ಕೆಟ್ಟ ಮೇಲೆ ಬುದ್ಧಿ ಬಂತು’ ಎಂಬಂತೆ ಈಗಲಾದರೂ ಸಿದ್ದರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ ಎನ್ನುವುದು ಸಮಾಧಾನಕರ ವಿಷಯ. ‘ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬರುವುದಿಲ್ಲ’ ಸಿಎಂ ಸಿದ್ದರಾಮಯ್ಯನವರೇ, ತಾವು ತನಿಖೆ ಎದುರಿಸಲೇ ಬೇಕು. ರಾಜೀನಾಮೆ ನೀಡಬೇಕು ಎಂದಿದ್ದರು.