Nagpur : ನಾಗ್ಪುರ ಹಿಂಸಾಚಾರದ ಹಿಂದೆ ಯಾರು? (Nagpur violence) ಈ ಹಿಂಸಾಚಾರ ಹೇಗೆ ಆರಂಭವಾಯಿತು? ಇದಕ್ಕೆ ಕಾರಣವೇನು? ಈ ಪ್ರಶ್ನೆಗಳ ಉತ್ತರ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಔರಂಗಜೇಬನ ಸಮಾಧಿಯನ್ನು ಕೇಂದ್ರವಾಗಿಟ್ಟುಕೊಂಡು ನಡೆದ ಗಲಭೆ ಕುರಿತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ (Maharashtra Deputy Chief Minister Eknath Shinde) ಮಹತ್ವದ ಸುಳಿವು ನೀಡಿದ್ದಾರೆ.
ಸೋಮವಾರ ಸಂಜೆ ನಾಗ್ಪುರದ ಕೆಲವು ಭಾಗಗಳಲ್ಲಿ ನಡೆದ ಘರ್ಷಣೆ ಶೀಘ್ರದಲ್ಲೇ ಹಿಂಸಾತ್ಮಕ ರೂಪ ಪಡೆದುಕೊಂಡಿತು. ಈ ಕುರಿತು ಮಾತನಾಡಿದ ಉಪಮುಖ್ಯಮಂತ್ರಿ ಶಿಂಧೆ, “ಇದು ಪೂರ್ವನಿಯೋಜಿತ ಪಿತೂರಿಯಾಗಿದೆ. ಪೆಟ್ರೋಲ್ ಬಾಂಬ್‌ಗಳ ಬಳಕೆ ಮತ್ತು ಹೊರಗಿನ ಜನರ ಹಸ್ತಕ್ಷೇಪ ಇದನ್ನು ದೃಢಪಡಿಸುತ್ತವೆ. ಈ ಘಟನೆಯಲ್ಲಿ ಸಮಾಜ ವಿರೋಧಿ ಶಕ್ತಿಗಳು ಭಾಗಿಯಾಗಿವೆ,” ಎಂದು ಹೇಳಿದ್ದಾರೆ.
ನಾಗ್ಪುರದ ಮಹಲ್ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿದ್ದು, ಹಲವಾರು ವಾಹನಗಳು ಹಾನಿಗೊಂಡಿವೆ. ಪೊಲೀಸರ ಮೇಲೂ ದಾಳಿ ನಡೆಸಲಾಗಿದೆ, ಇದರಿಂದ ನಾಲ್ವರು ಪೊಲೀಸರಿಗೆ ಗಾಯಗಳಾಗಿವೆ. ಈ ಘಟನೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಂಧೆ ತಿಳಿಸಿದ್ದಾರೆ. ಜನರು ಸಮುದಾಯಗಳ ನಡುವೆ ಜಗಳ ಹುಟ್ಟಿಸುವಂತಿಲ್ಲ ಮತ್ತು ಔರಂಗಜೇಬನನ್ನು ವೈಭವೀಕರಿಸಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.