ನಟ ಮತ್ತು ಶಾಸಕ ನಂದಮೂರಿ ಬಾಲಕೃಷ್ಣ ಅವರಿಗೆ ಅನಾರೋಗ್ಯ ಉಂಟಾಗಿ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ ಅವರು ಏನಾಗಿದ್ದಾರೆ ಮತ್ತು ಯಾವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿ ಇನ್ನಿಲ್ಲ. ಇದರಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ ಮತ್ತು ಅವರ ಆರೋಗ್ಯದ ಬಗ್ಗೆ ಅಧಿಕೃತ ಹೇಳಿಕೆ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸುತ್ತಿದ್ದಾರೆ.
ಆಂಧ್ರ ಪ್ರದೇಶದ ಸ್ಟಾರ್ ಶಾಸಕರಲ್ಲೊಬ್ಬರಾದ ಬಾಲಕೃಷ್ಣ ಟಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿದ್ದಾರೆ. ರಾಜ್ಯ ಸರ್ಕಾರದ ‘ಸೂಪರ್ ಸಿಕ್ಸ್’ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವರು ಹೋಗಿದ್ದರು, ಆದರೆ ಆರೋಗ್ಯ ಸಮಸ್ಯೆಯ ಕಾರಣದಿಂದ ಗೈರಾಗಿದ್ದರು. ಆ ಬಗ್ಗೆ ಸಚಿವ ಪಯ್ಯವುಲ ಕೇಶವ ಅವರು, “ಬಾಲಕೃಷ್ಣರಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಅವರು ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ” ಎಂದು ಹೇಳಿದ್ದಾರೆ.
ಬಾಲಕೃಷ್ಣ ಅವರು ತೆಲುಗು ಸಿನಿಮಾ ಪ್ರಪಂಚದಲ್ಲಿ ಬಹುಪ್ರಸಿದ್ಧರಾಗಿದ್ದು, ಕಳೆದ ನಾಲ್ಕು ಸಿನಿಮಾಗಳು ಹಿಟ್ ಆಗಿವೆ. ಈಗ ‘ಅಖಂಡ 2’ ಚಿತ್ರದ ಚಿತ್ರೀಕರಣದ ಕ್ಲೈಮ್ಯಾಕ್ಸ್ ಹಂತದಲ್ಲಿ ಇದ್ದ ಸಮಯದಲ್ಲಿ ಅವರ ಅನಾರೋಗ್ಯ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ವಿಶಿಷ್ಟ ಶೈಲಿಯ ಮೂಲಕ ಜನರನ್ನು ಮನರಂಜಿಸುತ್ತಿದ್ದರು. ಇಷ್ಟು ಸಕ್ರಿಯ ವ್ಯಕ್ತಿಗೆ ಅನಾರೋಗ್ಯದ ಹೊಡೆತ ಅಭಿಮಾನಿಗಳಿಗೆ ಹೆಚ್ಚು ಚಿಂತೆ ಮೂಡಿಸಿದೆ.
ಬಾಲಕೃಷ್ಣ ಗೈರಾಗಿದ್ದ ‘ಸೂಪರ್ ಸಿಕ್ಸ್’ ಕಾರ್ಯಕ್ರಮಕ್ಕೆ ಅವರ ಅಳಿಯ, ಸಿಎಂ ಪುತ್ರನೂ ಆಗಿರುವ ನಾರಾ ಲೋಕೇಶ್ ಸಹ ಗೈರಾಗಿದ್ದರು. ಕೆಲ ಸುದ್ದಿ ಪ್ರಕಾರ, ಬಾಲಕೃಷ್ಣ ಅನಾರೋಗ್ಯದ ಕಾರಣದಿಂದ ನಾರಾ ಲೋಕೇಶ್ ಗೈರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸಚಿವ ಪಯ್ಯವುಲ ಕೇಶವ ಅವರ ಹೇಳಿಕೆಯಂತೆ, ನಾರಾ ಲೋಕೇಶ್ ನೇಪಾಳದ ಕೆಲ ಸಮಸ್ಯೆಗಳನ್ನು ಗಮನದಲ್ಲಿಟ್ಟು ತೆಲುಗು ಜನರ ಸುರಕ್ಷತೆಯನ್ನು ನೋಡುತ್ತಿರುವ ಕಾರಣ ಕಾರ್ಯಕ್ರಮದಲ್ಲಿ ಹಾಜರಾಗಿರಲಿಲ್ಲ.