Chikkaballapur : ಬುಧವಾರ ಚಿಕ್ಕಾಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ನಂದಿ ಗಿರಿಧಾಮಕ್ಕೆ (Nandi Hills) ಪರಿಸರ ಮತ್ತು ಪ್ರವಾಸೋದ್ಯಮ ಸಚಿವ (Minister of Tourism, Ecology and Environment of Karnataka) ಆನಂದ್ ಸಿಂಗ್ (Anand Singh) ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಆನಂದ್ ಸಿಂಗ್ “ಗಣಿಗಾರಿಕೆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಆದರೆ ನಂದಿಗಿರಿಧಾಮಕ್ಕೆ ಗಣಿಗಾರಿಕೆಯಿಂದ ತೊಂದರೆಯಾದರೆ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಪತ್ರದ ಮೂಲಕ ಆ ಇಲಾಖೆಗೆ ಮನವಿ ಮಾಡುತ್ತೇವೆ. ಗಿರಿಧಾಮದಲ್ಲಿ ಭೂ ಕುಸಿತ ಸಂಭವಿಸಿದ್ದು ನಮಗೆ ಎಚ್ಚರಿಕೆಯ ಗಂಟೆಯಾಗಿದೆ.
ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರವಾಸಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಜತೆಗೆ ಸ್ಥಳೀಯ ಕಲೆಗಳ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ‘ಕಲಾಧಾಮ’ ಹೆಸರಿನಲ್ಲಿ ಚಟುವಟಿಕೆ ಆರಂಭಿಸುವ ಬಗ್ಗೆ ಚಿಂತಿಸಲಾಗಿದೆ. ಪರಿಸರವಾದಿಗಳ ಹೇಳಿಕೆಗಳನ್ನು ಗಮನದಲ್ಲಿತ್ತುಕೊಂಡು ಪರಿಸರಕ್ಕೆ ಧಕ್ಕೆ ಆಗದಂತೆ ರೋಪ್ ವೇ ರೂಪಿಸುತ್ತೇವೆ.
ಪಾರ್ಕಿಂಗ್ ಸಮಸ್ಯೆ ಹೆಚ್ಚಿರುವುದರಿಂದ ಬೆಟ್ಟದ ಕೆಳಭಾಗದಲ್ಲಿಯೇ ವಾಹನಗಳನ್ನು ಪ್ರವಾಸಿಗರು ನಿಲುಗಡೆ ಮಾಡಿ ಪ್ರವಾಸೋದ್ಯಮ ಇಲಾಖೆಯ ಚಿಕ್ಕ ವಾಹನಗಳಲ್ಲಿ ಬೆಟ್ಟಕ್ಕೆ ಬರುವ ವ್ಯವಸ್ಥೆ ಮಾಡಲಾಗುವುದು. ಇಲ್ಲಿ ಎಲ್ಲೆಡೆ ಸುತ್ತಾಡಿಸಿ ನಂತರ ಅವರನ್ನು ವಾಹನ ನಿಲುಗಡೆ ಸ್ಥಳಕ್ಕೆ ಕರೆದೊಯ್ಯಲಾಗುವುದು. ವಾಸಿಗರಿಗೆ ತೊಂದರೆ ಆಗದಂತೆ ಸೌಲಭ್ಯಗಳನ್ನು ಕಲ್ಪಿಸಲು ಪ್ರವೇಶ ಹಾಗೂ ಪಾರ್ಕಿಂಗ್ ಶುಲ್ಕ ಕಡಿತಗೊಳಿಸುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು” ಎಂದು ಹೇಳಿದರು.
ಸಚಿವರು ಪಾರ್ಕಿಂಗ್, ಉದ್ಯಾನ, ಮಕ್ಕಳ ಪಾರ್ಕ್ ನಿರ್ಮಾಣಕ್ಕೆ ಗುರುತಿಸಿರುವ ಸ್ಥಳ, ಯೋಗನಂದೀಶ್ವರ ದೇವಸ್ಥಾನ, ಟಿಪ್ಪು ಡ್ರಾಪ್, ಹಿಲ್ ವ್ಯೂಗೆ ಭೇಟಿ ನೀಡಿದರು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿವಿಧ ಮಳಿಗೆಗಳ ವಹಿವಾಟು, ವಾಹನ ನಿಲುಗಡೆ ವ್ಯವಸ್ಥೆ, ಸ್ವಚ್ಛತೆಯ ಬಗ್ಗೆ ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಸಚಿವರ ಜೊತೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕಿ ಸಿಂಧೂ.ಬಿ ರೂಪೇಶ್, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಹಾಗೂ ಅರಣ್ಯ ವಸತಿ ಹಾಗೂ ವಿಹಾರ ಧಾಮ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್, ತಹಶೀಲ್ದಾರ್ ಗಣಪತಿಶಾಸ್ತ್ರಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.