Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಗಿರಿಧಾಮದಲ್ಲಿ (Nandi Hills) ಭಾನುವಾರ ಬೆಟ್ಟ ಏರುವಾಗ ಆಯತಪ್ಪಿ ಬಿದ್ದ ನಿಶಾಂಕ್ (19) ರನ್ನು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ (Rescue Operation) ನಡೆಸಿ ರಕ್ಷಿಸಿದ್ದಾರೆ.
ಪ್ರವಾಸಿಗರಿಗೆ ನಿರ್ಬಂಧವಿದ್ದರೂ ನಿಶಾಂಕ್ ಭಾನುವಾರ ಬೆಳಿಗ್ಗೆಯೇ ನಂದಿ ಗಿರಿಧಾಮದ ಬಳಿ ಬಂದಿದ್ದಾರೆ. ಬ್ರಹ್ಮಗಿರಿ ಮೂಲಕ ನಂದಿಬೆಟ್ಟ ಏರಲು ಮುಂದಾಗಿದ್ದಾಗ ಆಯತಪ್ಪಿ ಪ್ರಪಾತಕ್ಕೆ ಬಿದ್ದಿದ್ದಾನೆ.
ನಿಶಾಂಕ್ ಬಿದ್ದಿರುವ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಆತನ ಸಹೋದರರು ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನದ ವೇಳೆಗೆ ಜಿಲ್ಲಾಡಳಿತ, ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೆಟ್ಟದಿಂದ ಕೆಳಗ್ಗೆ ಬಿದ್ದ ಆತನ ಬಗ್ಗೆ ಮಾಹಿತಿ ದೊರೆತಿದೆ. ಹಗ್ಗವನ್ನು ಕಟ್ಟಿ ನಿಶಾಂಕ್ ಸಿಲುಕಿದ್ದ ಸ್ಥಳಕ್ಕೆ ತೆರಳಲು ರಕ್ಷಣಾ ಸಿಬ್ಬಂದಿ ಪ್ರಯತ್ನಪಟ್ಟರು. ಆದರೆ ನಿಶಾಂಕ್ ಇದ್ದ ಪ್ರದೇಶ ತೀರಾ ಕಡಿದಾಗಿತ್ತು. ಸ್ವಲ್ಪ ಜಾರಿದರೂ ಮತ್ತೆ 300 ಅಡಿ ಕೆಳಕ್ಕೆ ಬೀಳುವ ಸಾಧ್ಯತೆ ಇತ್ತು. ಆದ ಕಾರಣ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸರು ನಿರ್ಧರಿಸಿ ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡುವಂತೆ ಯಲಹಂಕದ ಭಾರತೀಯ ವಾಯುಸೇನೆಗೆ ಮನವಿ ಮಾಡಿತು. ವಾಯುಸೇನೆಯ ಹೆಲಿಕಾಪ್ಟರ್ ನಿಶಾಂಕ್ ಸಿಲುಕಿದ್ದ ಪ್ರದೇಶಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಡಿವೈಎಸ್‌ಪಿ ವಾಸುದೇವ್, ಸಿಪಿಐ ಪ್ರಶಾಂತ್, ಪಿಎಸ್‌ಐ ಸುನಿಲ್, ವೇಣುಗೋಪಾಲ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Image : Heroes In Uniform