ನಾಳೆಯಿಂದ ನಂದಿನಿ ಹಾಲು (Nandini milk) ಸಿಗೋದು ಅನುಮಾನವಾಗಿದೆ ಎಂದು ವರದಿಯಾಗಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (KMF) ಆಡಳಿತ ಮಂಡಳಿಯ ವಿರುದ್ಧ ನೌಕರರು ಹಾಗೂ ಅಧಿಕಾರಿಗಳು ಪ್ರತಿಭಟನೆಗಾಗಿ ಮುಷ್ಕರ ಹಮ್ಮಿಕೊಳ್ಳುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಇದರಿಂದ ರಾಜ್ಯದಲ್ಲಿ ಹಾಲು ಉತ್ಪನ್ನಗಳ ಪೂರೈಕೆ ವಿಳಂಬವಾಗುವ ಆತಂಕ ಇದೆ.
ಕೆಎಂಎಫ್ ನೌಕರರು ತಮ್ಮ ವೇತನ ಸಂಬಂಧಿ ಮತ್ತು ಇತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆಬ್ರವರಿ 1 ರಿಂದ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈಗಾಗಲೇ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒಂದು ವಾರದ ಗಡುವು ನೀಡಲಾಗಿದ್ದು, ಇಂದು ಇವು ಈಡೇರಿಸದಿದ್ದರೆ ಮುಷ್ಕರ ನಡೆಯಲಿದೆ.
7ನೇ ವೇತನ ಆಯೋಗದ ಶಿಫಾರಸಿನಂತೆ ಉಳಿದ ವೇತನ ಹೆಚ್ಚಳವನ್ನು ಕೂಡಲೇ ನೀಡಬೇಕು ಎಂದು ನೌಕರರು ಆಗ್ರಹಿಸಿದ್ದಾರೆ. ಇದೀಗ, ಬಾಕಿ ಶೇ 8 ರಷ್ಟು ವೇತನವನ್ನು ಬಿಡುಗಡೆ ಮಾಡದೆ ಇರುವುದರಿಂದ, ಹಾಲು ಉತ್ಪಾದನೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಉಂಟಾಗಿದೆ.
ಕೆಎಂಎಫ್ ನೌಕರರ ಸಂಘವು 7,000 ಉದ್ಯೋಗಿಗಳನ್ನು ಹೊಂದಿದ್ದು, ಅವರು ಈ ಅವಶ್ಯಕತೆಗಳನ್ನು ಪುನಃ ಒತ್ತಾಯಿಸುತ್ತಿದ್ದಾರೆ. ಹಾಲು ಉತ್ಪನ್ನಗಳ ಪೂರೈಕೆ ಮತ್ತು ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ, ರಾಜ್ಯದ ಹೈನು ಉದ್ಯಮಕ್ಕೆ ಭಾರೀ ಪೆಟ್ಟು ಬೀಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.