Bengaluru: ಬೆಂಗಳೂರಿನಲ್ಲಿ ಜೆಪಿ ನಗರದಿಂದ ಹೆಬ್ಬಾಳ ವರೆಗೆ ಹೊಸ ಡಬಲ್ ಡೆಕ್ಕರ್ ಫ್ಲೈಓವರ್ (Double-Decker Flyover) ನಿರ್ಮಾಣವಾಗುತ್ತಿದೆ. ಇದು ಬೆಂಗಳೂರಿನ ಅತಿ ಉದ್ದದ ಮೇಲ್ಸೇತುವೆಯಾಗಿದ್ದು, 32.15 ಕಿ.ಮೀ ಉದ್ದವಿರಲಿದೆ. ಈ ಫ್ಲೈಓವರ್ ಔಟರ್ ರಿಂಗ್ ರೋಡ್ ನಲ್ಲಿ ಹಾದುಹೋಗಲಿದ್ದು, ಮೆಟ್ರೋ ಲೈನ್ ಕೂಡ ಇದರಲ್ಲಿ ಇರಲಿದೆ.
ಯೋಜನೆಯ ಅಂದಾಜು ವೆಚ್ಚ 9800 ಕೋಟಿ ರೂಪಾಯಿಯಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಹೆಬ್ಬಾಳ, ಬಿಇಎಲ್ ರಸ್ತೆ, ಸುಮನಹಳ್ಳಿ ಮತ್ತು ಗೊರಗುಂಟೆಪಾಳ್ಯ ಪ್ರದೇಶಗಳಿಗೆ ಭೇಟಿ ನೀಡಿ, ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದ್ದಾರೆ. ಬೆಂಗಳೂರಿನ ಸಂಚಾರದಟ್ಟಣೆ ಕಡಿಮೆ ಮಾಡುವುದು ಮತ್ತು ಸುಗಮ ಸಂಚಾರವನ್ನು ಹೊಂದಿಸುವ ಉದ್ದೇಶದಿಂದ ಈ ಮೇಲ್ಸೇತುವೆ ನಿರ್ಮಾಣಗೊಳ್ಳುತ್ತಿದೆ.
40 ಕಿ.ಮೀ.ಗಿಂತ ಹೆಚ್ಚು ವಿಸ್ತಾರವಾಗಿರುವ ನಮ್ಮ ಮೆಟ್ರೋ ಹಂತ 3 ರ ಭಾಗವಾಗಿರುವ ಈ ಹೊಸ ಕಾರಿಡಾರ್ ಡಬಲ್ ಡೆಕ್ಕರ್ ಫ್ಲೈಓವರ್ ಒಳಗೊಂಡಿರುತ್ತದೆ. ಯೋಜನೆಯ ಕಾರ್ಯಸಾಧ್ಯತಾ ಅಧ್ಯಯನವು ಈಗಾಗಲೇ ಶೇಕಡಾ 90 ರಷ್ಟು ಪೂರ್ಣಗೊಂಡಿದ್ದು, ಎತ್ತರದ ರಸ್ತೆ ಮತ್ತು ಮೆಟ್ರೋ ಮಾರ್ಗದ ಹೊಂದಾಣಿಕೆಗೆ ಕೆಲವು ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಇದರಿಂದಾಗಿ ಯೋಜನೆಯ ಅನುಷ್ಠಾನದಲ್ಲಿ ತುಸು ವಿಳಂಬವಾಗುವ ಸಾಧ್ಯತೆ ಇದೆ.
ನಗರದ ದೀರ್ಘಕಾಲೀನ ಬೆಳವಣಿಗೆಯನ್ನು ಗಮನದಲ್ಲಿಟ್ಟು ಈ ಯೋಜನೆ ರೂಪಿಸಲಾಗಿದೆ. ಯೋಜನೆಯ ವೆಚ್ಚವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ನಮ್ಮ ಮೆಟ್ರೋ ನಡುವೆ ಸಮಾನವಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.