ದೆಹಲಿಯ ಚಾಣಕ್ಯಪುರಿಯ ಕೌಟಿಲ್ಯ ಮಾರ್ಗದಲ್ಲಿ 138 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ‘Kaveri’ ಕರ್ನಾಟಕ ಭವನವನ್ನು (Karnataka Bhavan) ಇಂದು ಉದ್ಘಾಟಿಸಲಾಗುತ್ತಿದೆ. ಈ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕೇಂದ್ರ ಮತ್ತು ರಾಜ್ಯ ಸಚಿವರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
1967ರಲ್ಲಿ ನಿರ್ಮಿಸಲಾದ ಹಳೆಯ ಕರ್ನಾಟಕ ಭವನ ಶಿಥಿಲಗೊಂಡ ಕಾರಣ, 9 ಮಹಡಿಗಳ ಈ ಹೊಸ ಭವನವನ್ನು ನಿರ್ಮಿಸಲಾಗಿದೆ. 60,870 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಕಟ್ಟಡದಲ್ಲಿ 2 ವಿವಿಐಪಿ ಸೂಟ್‌ಗಳು, 32 ಸೂಟ್ ರೂಮ್‌ಗಳು, 18 ಸಿಂಗಲ್ ರೂಮ್‌ಗಳು ಹಾಗೂ 75 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇದೆ.
ಇಲ್ಲಿಯೇ ರಾಜ್ಯಪಾಲ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಹೈಕೋರ್ಟ್ ನ್ಯಾಯಮೂರ್ತಿಗಳು, ನಿವಾಸಿ ಆಯುಕ್ತರ ಕಚೇರಿ, ಶಿಷ್ಟಾಚಾರ ವಿಭಾಗ, ಕಾನೂನುಕೋಶ, ಸಂಸದರ ಕೋಶ, ಲೆಕ್ಕಶಾಖೆ ಕಾರ್ಯನಿರ್ವಹಿಸಲಿವೆ. ಕರ್ನಾಟಕ ಪ್ರವಾಸೋದ್ಯಮ ನಿಗಮದ ಹೆಲ್ಪ್ ಡೆಸ್ಕ್ ಕೂಡ ಇಲ್ಲಿ ಇರಲಿದೆ.
2019ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣವು ಕೋವಿಡ್ ಕಾರಣದಿಂದ ವಿಳಂಬವಾಯಿತು. ಆರಂಭಿಕ ಅಂದಾಜು 81 ಕೋಟಿ ರೂ. ಇತ್ತು, ಆದರೆ ವೆಚ್ಚ ಪರಿಷ್ಕರಣೆ ನಂತರ 138 ಕೋಟಿ ರೂ. ಆಗಿದೆ. ಬೆಂಗಳೂರು ಮೂಲದ ಮೆ. ಬಾಲಾಜಿ ಕೃಪ ಪ್ರೊಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಈ ಕಟ್ಟಡವನ್ನು ನಿರ್ಮಿಸಿದೆ.