2015ರಲ್ಲಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ (US President Barack Obama) ಭೇಟಿ ನೀಡಿದ ಸಂದರ್ಭದಲ್ಲಿ, ಸ್ಫೋಟಕ್ಕೆ ಸಂಚು ರೂಪಿಸಿದ್ದ ಮೂರು IM ಉಗ್ರರನ್ನು ಬೆಂಗಳೂರಿನ NIA ವಿಶೇಷ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ಪಾಕಿಸ್ತಾನದಿಂದ ಬಂದ ಸೂಚನೆಯ ಮೇರೆಗೆ ಉಗ್ರರು ಈ ಸಂಚು ರೂಪಿಸಿದ್ದರು.
ಭಟ್ಕಳದ ಡಾ. ಸೈಯದ್ ಇಸ್ಮಾಯಿಲ್ ಅಫಾಕ್, ಅಬ್ದುಲ್ ಸುಬೈರ್ ಮತ್ತು ಸದ್ದಾಂ ಹುಸೇನ್ ವಿವಿಧ ಕಾಯ್ದೆಗಳಡಿ ದೋಷಿಗಳು ಎಂದು ತೀರ್ಪು ಪ್ರಕಟಿಸಲಾಗಿದೆ. ಡಾ. ಅಫಾಕ್ ಪಾಕಿಸ್ತಾನದ ಕರಾಚಿಯ ಅರ್ಸಾಲಾ ಅಬೀರ್ ಅವರೊಂದಿಗೆ ವಿವಾಹವಾಗಿದ್ದರು.
2015ರಲ್ಲಿ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಾತ್ಕಾಲಿಕ ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ, ಭಟ್ಕಳದ ರಿಯಾಜ್ ಅಹಮದ್ ಸಯೀದಿ ಮತ್ತು ಜೈನುಲ್ಲಾಬುದ್ದೀನ್ ಅವರನ್ನು ಖುಲಾಸೆಗೊಳಿಸಲಾಗಿದೆ. ಆದರೆ ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್, ಅಲಿಫ್, ಸಮೀರ್ ಇನ್ನೂ ತಲೆಮರೆಸಿಕೊಂಡಿದ್ದಾರೆ.
ದೋಷಿಗಳಿಗೆ ವಿಧಿಸುವ ಶಿಕ್ಷೆಯನ್ನು ಎನ್ಐಎ ನ್ಯಾಯಾಲಯ ಇಂದು ಪ್ರಕಟಿಸಲಿದೆ. ಪೊಲೀಸ್ ತಂಡ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದ ತನಿಖೆಯ ವೇಳೆ ಉಗ್ರರಿಂದ ಡಿಟೋನೇಟರ್, ಜಿಲಾಟಿನ್ ಸ್ಟಿಕ್, ಪೈಪ್ ಬಾಂಬ್, ಸ್ಫೋಟಕ ವಸ್ತುಗಳು ಮತ್ತು ಗನ್ ಪೌಡರ್ ಮುಂತಾದ ವಸ್ತುಗಳನ್ನು ವಶಪಡಿಸಿತು.
ಮತ್ತೋರ್ವ ಶಂಕಿತ ರಿಯಾಜ್ ಅಹಮದ್ ಸಯೀದಿ, ದೇಶ ಬಿಟ್ಟು ಪರಾರಿಯಾಗಲು ಯತ್ನಿಸುವಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿತನಾಗಿದ್ದ.