Bengaluru: ಹಿಂದಿ (Hindi) ಹೇರಿಕೆ ಆಗುತ್ತಿದೆ ಎಂಬ ಆರೋಪಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ರಾಜ್ಯಸಭೆಯಲ್ಲಿ ತೀವ್ರ ಪ್ರತಿಸ್ಪಂಧನೆ ನೀಡಿದರು. ಭಾಷೆಯ ಹೆಸರಿನಲ್ಲಿ ದೇಶವನ್ನು ವಿಭಜಿಸಲು ಯಾರಿಗೂ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಡಿಸೆಂಬರ್ ತಿಂಗಳಿನಿಂದ ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ಅಲ್ಲಿನ ಪ್ರಾದೇಶಿಕ ಭಾಷೆಗಳಲ್ಲಿ ಪತ್ರ ವ್ಯವಹಾರ ನಡೆಸಲಿದೆ ಎಂದು ಘೋಷಿಸಿದರು.
ಡಿಸೆಂಬರ್ ಬಳಿಕ ನಾಗರಿಕರು, ಮುಖ್ಯಮಂತ್ರಿಗಳು, ಸಚಿವರು ಮತ್ತು ಸಂಸದರು ತಮ್ಮ ಭಾಷೆಯಲ್ಲಿಯೇ ಪತ್ರ ವ್ಯವಹಾರ ಮಾಡಬಹುದಾಗಿದೆ. ಭಾಷೆಯ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಇದು ತಕ್ಕ ಉತ್ತರ ಎಂದು ಹೇಳಿದರು.
ಬಿಜೆಪಿ ದಕ್ಷಿಣ ಭಾಷೆಗಳಿಗೆ ವಿರೋಧಿಯಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಅಮಿತ್ ಶಾ, ಭಾರತದಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಗೌರವ ಇದೆ ಎಂದು ಹೇಳಿದರು. ನರೇಂದ್ರ ಮೋದಿ ಸರ್ಕಾರ ಪ್ರಾದೇಶಿಕ ಭಾಷೆಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ವಿವರಿಸಿದರು.
ಹಿಂದಿ ಯಾವುದೇ ಪ್ರಾದೇಶಿಕ ಭಾಷೆಯೊಂದಿಗೆ ಸ್ಪರ್ಧಿಸುವುದಿಲ್ಲ, ಬದಲಾಗಿ ಭಾಷಾ ಏಕತೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು.
ತಮಿಳುನಾಡಿನ ಆಡಳಿತಾರೂಢ ಡಿಎಂಕೆ ವಿರುದ್ಧ ಕಿಡಿಕಾರಿದ ಅಮಿತ್ ಶಾ, ಭಾಷೆಯ ಹೆಸರಿನಲ್ಲಿ ರಾಜಕೀಯ ಮಾಡಬಾರದು ಎಂದರು. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸುಗಳನ್ನು ತಮಿಳಿಗೆ ಭಾಷಾಂತರಿಸಲು ಡಿಎಂಕೆ ಸರ್ಕಾರಕ್ಕೆ ಧೈರ್ಯವಿಲ್ಲ ಎಂದು ಕಟುಟಿಪ್ಪಣಿ ಮಾಡಿದರು.