Vijayapura, Devanahalli: ರಾಜ್ಯದಲ್ಲಿ APL Ration Card ರದ್ದುಪಡಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಮುಂದೆಯೂ ರದ್ದುಗೊಳಿಸುವ ಯೋಚನೆ ಇಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್‌ಗಳಿಗೆ ಸಂಬಂಧಿಸಿದ ಗೊಂದಲಗಳಿಗೆ ಸ್ಪಷ್ಟನೆ ನೀಡಿದರು. ರಾಜ್ಯದ ಶೇ. 80ರಷ್ಟು ಜನರು ಬಿಪಿಎಲ್ ಕಾರ್ಡ್ ಹೊಂದಿದ್ದು, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಈ ಪ್ರಮಾಣ ಶೇ. 50ರಷ್ಟಿದೆ. ಆದಾಯ ತೆರಿಗೆ ಪಾವತಿದಾರರು, ಕಾರು ಹೊಂದಿರುವವರು ಮತ್ತು ಅನುಕೂಲಸ್ಥರು ಬಿಪಿಎಲ್ ಕಾರ್ಡ್‌ಗೆ ಅರ್ಹರಲ್ಲ ಎಂದು ಪರಿಷ್ಕರಣೆ ನಡೆಸಲಾಗುತ್ತಿದೆ. ಇಂತಹವರನ್ನು ಎಪಿಎಲ್ ಪಟ್ಟಿಗೆ ಸೇರಿಸಲಾಗುವುದು ಆದರೆ, ಅವರ ಕಾರ್ಡ್‌ಗಳನ್ನು ರದ್ದು ಮಾಡಲಾಗುವುದಿಲ್ಲ ಎಂದರು.
ರಾಜ್ಯದಲ್ಲಿ 1.26 ಕೋಟಿಗೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಹಿಂದಿನ ಸರ್ಕಾರ 4.5 ಕೋಟಿ ಜನರನ್ನು ಬಿಪಿಎಲ್ ಪಟ್ಟಿಗೆ ಸೇರಿಸಿತ್ತು. ಆ ಸಮಯದಲ್ಲಿ ಎಪಿಎಲ್ ಕಾರ್ಡ್‌ಗಳಿಗೆ ಸಹ ಸಬ್ಸಿಡಿ ದರದಲ್ಲಿ ಆಹಾರ ನೀಡಲಾಗುತ್ತಿತ್ತು. ಆದರೆ ಹೆಚ್ಚಿನವರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿರಲಿಲ್ಲ. ಸಬ್ಸಿಡಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪರಿಷ್ಕರಣೆ ಪೂರ್ಣಗೊಂಡ ನಂತರ ಎಪಿಎಲ್ ಕಾರ್ಡ್‌ಗಳಿಗೂ ಪಡಿತರ ನೀಡಲಾಗುತ್ತದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಅನುದಾನದಲ್ಲಿ ಕೊರತೆ ಇಲ್ಲ
ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ₹8,000 ಕೋಟಿ ಮೀಸಲಾಗಿದ್ದು, ಇದರಲ್ಲಿಂದ ₹6,500 ರಿಂದ ₹7,000 ಕೋಟಿ ಖರ್ಚಾಗುತ್ತಿದೆ. ₹1,000 ಕೋಟಿ ಉಳಿತಾಯವಾಗುತ್ತಿದ್ದು, ಹಣದ ಕೊರತೆ ಸರ್ಕಾರಕ್ಕೆ ಇಲ್ಲ ಎಂದು ಮುನಿಯಪ್ಪ ಸ್ಪಷ್ಟಪಡಿಸಿದರು.