Bengaluru: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (Former Karnataka DGP OM Prakash) ಅವರು ತಮ್ಮ ಮನೆಯಲ್ಲೇ ಬರ್ಬರವಾಗಿ ಹತ್ಯೆಯಾದ ಘಟನೆ ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಅವರ ಪತ್ನಿ ಪಲ್ಲವಿ ಅವರನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಹೆಚ್ಎಸ್ಆರ್ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ, ಚಾಕುವಿನಿಂದ ಇರಿದು ಓಂ ಪ್ರಕಾಶ್ ಅವರನ್ನು ಕೊಲೆ ಮಾಡಲಾಗಿದೆ. ಮೊದಲಿಗೆ ಯಾರನ್ನೂ ಬಂಧಿಸದ ಪೊಲೀಸರು, ಪತ್ನಿ ಪಲ್ಲವಿ ಹಾಗೂ ಮಗಳು ಕೃತಿಯನ್ನು ವಿಚಾರಣೆಗೆ ಒಳಪಡಿಸಿದರು. ನಂತರ ಪಲ್ಲವಿಯನ್ನು ಬಂಧಿಸಲಾಗಿದೆ.
ಪಲ್ಲವಿ, ಅವರ ಮಗಳು ಕೃತಿ ಹಾಗೂ ಮಗ ಕಾರ್ತಿಕೇಶ್ ಸೇರಿದಂತೆ ಕುಟುಂಬದವರ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಮೊಬೈಲ್ ಫೋನ್‌ಗಳನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಪಲ್ಲವಿ, ಆತ್ಮರಕ್ಷಣೆಗೆ ಈ ಕೃತ್ಯ ಎಸಗಿದ್ದೆನೆ ಎಂದು ಮಡಿವಾಳ ಎಸಿಪಿಗೆ ಹೇಳಿದ್ದಾರೆ.
ಪಲ್ಲವಿ ಚಾಕು ಇರಿಸಲು ಮುಂಚೆ ಓಂ ಪ್ರಕಾಶ್ ಮೇಲೆ ಖಾರದ ಪುಡಿ ಎರಚಿ, ನಂತರ ಅಡುಗೆ ಎಣ್ಣೆ ಸುರಿದಿದ್ದಾಳೆ. ಆ ನಂತರ ಅವರ ಕೈ ಕಾಲು ಕಟ್ಟಿದ ಮೇಲೆ ಚಾಕುವಿನಿಂದ 8-10 ಬಾರಿ ಇರಿದಿದ್ದಾಳೆ. ಇದರಲ್ಲಿ 4-5 ಇರಿತಗಳು ಹೊಟ್ಟೆ ಭಾಗದಲ್ಲಿದ್ದವು.
ಹತ್ಯೆಯಾದ ಓಂ ಪ್ರಕಾಶ್ ಸುಮಾರು 15-20 ನಿಮಿಷಗಳ ಕಾಲ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದಾರೆ. ಪಲ್ಲವಿ ಈ ದೃಶ್ಯ ನೋಡುತ್ತಾ ನಿಂತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪತಿ ಮೃತಪಟ್ಟ ನಂತರ, ಪಲ್ಲವಿ ಐಪಿಎಸ್ ಅಧಿಕಾರಿಯೊಬ್ಬರ ಪತ್ನಿ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಘಟನೆ ರಾಜ್ಯದ ಪೊಲೀಸ್ ಇಲಾಖೆಗೆ ದೊಡ್ಡ ಆಘಾತವನ್ನು ತಂದಿದೆ. ಓಂ ಪ್ರಕಾಶ್ ಅವರು ರಾಜ್ಯದ ಅತ್ಯುನ್ನತ ಪೊಲೀಸ್ ಹುದ್ದೆವರೆಗೆ ಸೇವೆ ಸಲ್ಲಿಸಿದ್ದ ಕಾರಣ, ಬೆಂಗಳೂರಿನ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.