ಏಷ್ಯಾ ಕಪ್ (Asia Cup) ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೂಪರ್- 4ಗೆ ಪ್ರವೇಶ ಪಡೆದಿದೆ. ಬುಧವಾರ UAE ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ 41 ರನ್‌ಗಳ ಜಯ ದಾಖಲಿಸಿತು. ಆದರೆ ಈ ಪಂದ್ಯಕ್ಕೂ ಮುನ್ನ ದೊಡ್ಡ ಗಲಾಟೆ ನಡೆಯಿತು.
ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಹಸ್ತಲಾಘವ ವಿವಾದ ಉಂಟಾಗಿದ್ದರಿಂದ, ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸಬೇಕೆಂದು ಪಾಕಿಸ್ತಾನ ತಂಡ ಐಸಿಸಿಗೆ ಪತ್ರ ಬರೆದಿತ್ತು. ಆದರೆ ಐಸಿಸಿ ಅದನ್ನು ತಿರಸ್ಕರಿಸಿ, ಪೈಕ್ರಾಫ್ಟ್‌ರನ್ನೇ ಯುಎಇ ವಿರುದ್ಧದ ಪಂದ್ಯಕ್ಕೂ ನೇಮಿಸಿತು. ಇದರಿಂದ ಪಾಕಿಸ್ತಾನ ಆಟಗಾರರು ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ತೆರಳದೇ ಪಂದ್ಯವನ್ನು ಬಹಿಷ್ಕರಿಸುವ ಭೀತಿ ಉಂಟಾಯಿತು.
ನಂತರ ಐಸಿಸಿ ಸಿಇಒ ಸಂಜೋಗ್ ಗುಪ್ತಾ ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮಧ್ಯಸ್ಥಿಕೆ ನಡೆಸಿದ ಪರಿಣಾಮ ಸಮಸ್ಯೆ ಇತ್ಯರ್ಥವಾಯಿತು. ಪೈಕ್ರಾಫ್ಟ್ ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿತು. ಅಂತಿಮವಾಗಿ ಪಾಕಿಸ್ತಾನ ತಂಡ ಮೈದಾನಕ್ಕೆ ಬಂದರೂ ಪಂದ್ಯ ಒಂದು ಗಂಟೆ ತಡವಾಗಿ ಆರಂಭವಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತು. ಫಖರ್ ಜಮಾನ್ ಅರ್ಧಶತಕ ಬಾರಿಸಿದರು. ಯುಎಇ ಬೌಲರ್ ಜುನೈದ್ ಸಿದ್ದಿಕಿ 4 ವಿಕೆಟ್ ಪಡೆದರು.
147 ರನ್ ಗುರಿ ಬೆನ್ನಟ್ಟಿದ ಯುಎಇ 17.4 ಓವರ್ಗಳಲ್ಲಿ 105 ರನ್‌ಗೆ ಆಲೌಟ್ ಆಯಿತು. ರಾಹುಲ್ ಚೋಪ್ರಾ 35 ರನ್ ಗಳಿಸಿದರು. ಪಾಕಿಸ್ತಾನ ಬೌಲರ್ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ಅಬ್ರಾರ್ ಅಹ್ಮದ್ ತಲಾ 2 ವಿಕೆಟ್ ಪಡೆದರು.
ಈ ಗೆಲುವಿನಿಂದ ಪಾಕಿಸ್ತಾನ ಸೂಪರ್-4ಗೆ ಪ್ರವೇಶ ಪಡೆದಿದೆ. ಭಾನುವಾರ ಭಾರತ ವಿರುದ್ಧ ಮತ್ತೊಮ್ಮೆ ಕಾದಾಟಕ್ಕಿಳಿಯಲಿದೆ. ಹಿಂದಿನ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸಿತ್ತು. ಸೂಪರ್-4 ಹಂತದಲ್ಲಿ ಅಗ್ರ ಎರಡು ತಂಡಗಳು ಫೈನಲ್‌ಗೆ ಮುನ್ನಡೆಯಲಿವೆ.