Tel Aviv: ಇಸ್ರೇಲ್ (Israel) ಮತ್ತು ಹಮಾಸ್ (Hamas) ನಡುವಿನ ಯುದ್ಧದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ತಾತ್ಕಾಲಿಕ ಕದನ ವಿರಾಮ ಘೋಷಿಸಲಾಯಿತು, ಆದರೆ ಮಾತುಕತೆ ವಿಫಲವಾಗಿದ್ದರಿಂದ ಮತ್ತೆ ಯುದ್ಧ ಆರಂಭವಾಗಿದೆ. ಇಸ್ರೇಲ್ ಗಾಜಾ ಪಟ್ಟಿಯಲ್ಲಿ ಮತ್ತೆ ದಾಳಿ ನಡೆಸಿದೆ.
ಗಾಜಾ ಪಟ್ಟಿಯಲ್ಲಿನ ಪ್ಯಾಲೆಸ್ಟೈನಿಯನ್ನರು (Palestinians) ಹಮಾಸ್ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದ್ದಾರೆ. ಯುದ್ಧ ನಿಲ್ಲಿಸಲು ಆಗ್ರಹಿಸುತ್ತಾ, ಹಮಾಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಪ್ರತಿಭಟನಾಕಾರರು “ನಮಗೆ ಹಮಾಸ್ ಬೇಡ”, “ನಾವು ಯುದ್ಧ ಬಯಸುವುದಿಲ್ಲ” ಎಂಬ ಬರಹಗಳಿರುವ ಫಲಕಗಳನ್ನು ಹಿಡಿದುಕೊಂಡಿದ್ದಾರೆ. ಹಮಾಸ್ ವಿರೋಧಿ ಘೋಷಣೆಗಳಿರುವ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಗಾಜಾ ಪಟ್ಟಿಯ ಬೀಟ್ ಲಹಿಯಾ ನಗರದಲ್ಲಿ ಮಂಗಳವಾರ ಜನರು ರಸ್ತೆಗಿಳಿದು ಯುದ್ಧ ವಿರೋಧಿ ಪ್ರತಿಭಟನೆ ನಡೆಸಿದರು. “ನಾವು ಸಾಯಲು ಬಯಸುವುದಿಲ್ಲ, ನಮ್ಮ ಮಕ್ಕಳ ರಕ್ತ ಚೆಲ್ಲಲು ಬಿಡುವುದಿಲ್ಲ” ಎಂಬ ಘೋಷಣೆಗಳು ಕೇಳಿಬಂದವು.
2023 ಅಕ್ಟೋಬರ್ 7 ರಿಂದ ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧದಲ್ಲಿ 24,000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ, 10,000 ಮಕ್ಕಳು. 60,000 ಮಂದಿ ಗಾಯಗೊಂಡಿದ್ದಾರೆ. ಮನೆಗಳನ್ನು ಕಳೆದುಕೊಂಡ ಹಲವರು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.