
ಲಕ್ನೋ: ರಸ್ತೆಗಳಲ್ಲಿ ನಮಾಜ್ ಮಾಡುವವರ ಪಾಸ್ಪೋರ್ಟ್ ಹಾಗೂ ಚಾಲನಾ (Passport, license ) ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಮೀರತ್ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ವರ್ಷ ನಗರದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ಮಾಡಲು ಅನುಮತಿ ಇಲ್ಲ. ಯಾರಾದರೂ ಈ ನಿಯಮ ಉಲ್ಲಂಘಿಸಿದರೆ ಅವರ ವಿರುದ್ಧ FIR ದಾಖಲಾಗಲಿದೆ. ಮೀರತ್ SP ಆಯುಷ್ ವಿಕ್ರಮ್ ಅವರು ಧಾರ್ಮಿಕ ಮುಖಂಡರು ಮತ್ತು ಇಮಾಮ್ ಗಳಿಗೆ ಮನವಿ ಮಾಡಿದ್ದು, ಜನರು ಕಡ್ಡಾಯವಾಗಿ ಮಸೀದಿಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು ಎಂದು ಹೇಳಿದ್ದಾರೆ.
ನಿಯಮ ಪಾಲನೆ ಖಚಿತಪಡಿಸಲು ಪೊಲೀಸರು ಡ್ರೋನ್ ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ ನಡೆಸಲಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿಗಳನ್ನು ಹರಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು.
ನಿಯಮ ಉಲ್ಲಂಘಿಸುವವರ ಪಾಸ್ಪೋರ್ಟ್ ಹಾಗೂ ಚಾಲನಾ ಪರವಾನಗಿಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ. ಹೊಸ ಪಾಸ್ಪೋರ್ಟ್ ಪಡೆಯಲು ನ್ಯಾಯಾಲಯದಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ಅಗತ್ಯವಿರುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಕಳೆದ ವರ್ಷ ಇದೇ ನಿಯಮ ಉಲ್ಲಂಘನೆಗಾಗಿ 200 ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, 80 ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಲಾಗಿದೆ. ಈ ವರ್ಷವೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ.
ಯಾವುದೇ ಅಶಾಂತಿ ತಡೆಗಟ್ಟಲು ಲಕ್ನೋ, ಸಂಭಾಲ್, ಅಲಿಗಢ ಸೇರಿದಂತೆ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ನಮಾಜ್ ನಿಷೇಧದ ವಿರುದ್ಧ ಎಸ್ಪಿ ಸಂಸದ ಜಿಯಾವುರ್ ರಹಮಾನ್ ಬರ್ಕೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಈ ನಿರ್ಧಾರವನ್ನು ಅಪಘಾತಗಳ ತಡೆಗಟ್ಟಲು ಹಾಗೂ ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.