ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan’s son) ಅವರ ಪುತ್ರ ಮಾರ್ಕ್ ಶಂಕರ್ ಸಿಂಗಪುರದ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಇತ್ತೀಚೆಗಷ್ಟೆ ಆ ಶಾಲೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಈ ಘಟನೆಯಲ್ಲಿ ಮಾರ್ಕ್ ಶಂಕರ್ ಅವರಿಗೆ ಕಾಲು, ಬೆನ್ನು ಮತ್ತು ಕೈಗಳಿಗೆ ತೀವ್ರವಾದ ಸುಟ್ಟ ಗಾಯಗಳಾಗಿವೆ. ಜೊತೆಗೆ ಹೆಚ್ಚು ಹೊಗೆಯಿಂದ ಉಸಿರಾಟದ ತೊಂದರೆ ಉಂಟಾಗಿ, ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ಕಾರಣದಿಂದ ಪವನ್ ಕಲ್ಯಾಣ್ ಸಿಂಗಪುರಕ್ಕೆ ತೆರಳಿ, ಮಗನ ಆರೈಕೆಯಲ್ಲಿ ತೊಡಗಿದ್ದಾರೆ. ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ ಅಣ್ಣಾ ಲೆಜ್ನೇವಾ ಕೂಡ ಸಿಂಗಪುರದಲ್ಲೇ ತಮ್ಮ ಮಕ್ಕಳು ಮಾರ್ಕ್ ಮತ್ತು ಪೊಲೇನಾ ಜೊತೆ ನೆಲೆಸಿದ್ದಾರೆ. ಪವನ್ ಅವರ ಮೊದಲ ಪತ್ನಿ ನಂದಿನಿಗೆ ಮಕ್ಕಳಿಲ್ಲ. ಎರಡನೇ ಪತ್ನಿ ರೇಣುಕಾಗೆ ಅಕಿರಾ ನಂದ ಮತ್ತು ಆದ್ಯಾ ಎಂಬ ಇಬ್ಬರು ಮಕ್ಕಳು ಇದ್ದಾರೆ. ಅಕಿರಾ ನಂದ ಈಗ ಸಿನಿಮಾ ನಟನಾಗಿ ಸಜ್ಜಾಗುತ್ತಿದ್ದಾರೆ ಹಾಗೂ ಪವನ್ ನಟಿಸಿರುವ ‘ಓಜಿ’ ಸಿನಿಮಾದಲ್ಲಿ ನಟಿಸಿದ್ದಾರಂತೆ.
ರಾಜಕೀಯದಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಪವನ್ ಕಲ್ಯಾಣ್ ಈಗ ಸಿನಿಮಾಕ್ಕೆ ಕಡಿಮೆ ಸಮಯ ಕೊಡುತ್ತಿದ್ದಾರೆ. ಈ ಹಿಂದೆ ಆರಂಭಿಸಿದ ಕೆಲವು ಸಿನಿಮಾಗಳನ್ನು ಮಾತ್ರ ಪೂರ್ಣಗೊಳಿಸುತ್ತಿದ್ದು, ‘ಹರಿಹರ ವೀರ ಮಲ್ಲು’, ‘ಓಜಿ’ ಹಾಗೂ ‘ಉಸ್ತಾದ್ ಗಬ್ಬರ್’ ಅವರು ನಟಿಸಿರುವ ಮುಂದಿನ ಚಿತ್ರಗಳು.