Bengaluru: ರಾಜ್ಯದಲ್ಲಿರುವ ಅಕ್ರಮ ವಿದೇಶಿ ವಲಸಿಗರನ್ನು ಗುಜರಾತ್ ಮಾದರಿಯಲ್ಲಿಯೇ ಗಡಿಪಾರು ಮಾಡುವ ಕಾರ್ಯ ನಡೆಯುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ (Home Minister G. Parameshwara) ಹೇಳಿದರು.
ಅವರು ಇಂದು ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ,
“ಅಕ್ರಮವಾಗಿ ದೇಶಕ್ಕೆ ಬಂದಿರುವವರನ್ನು ತಕ್ಷಣವೇ ವಾಪಸ್ ಕಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗಾಗಲೇ 200ಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದ್ದು, ಕ್ರಮ ಜರುಗುತ್ತಿದೆ” ಎಂದು ತಿಳಿಸಿದರು.
“ಕಾಂಗ್ರೆಸ್ ಈ ವಿಚಾರದಲ್ಲಿ ಸಡಿಲವಾಗಿದೆ ಅಂತ ಹೇಳೋದು ಸರಿಯಲ್ಲ. ನಾವು ಪ್ರತಿದಿನವೂ ಪರಿಶೀಲನೆ ಮಾಡುತ್ತಿದ್ದೇವೆ. ಅಕ್ರಮ ವಾಸದ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಗಡಿಪಾರು ಮಾಡ್ತೀವಿ. ಕಟ್ಟಡ ಕೆಲಸಗಳಲ್ಲಿ ಅಕ್ರಮ ವಲಸಿಗರು ಇದ್ದರೆ ಅವರನ್ನೂ ವಾಪಸ್ ಕಳುಹಿಸುತ್ತೇವೆ” ಎಂದರು.
ಅವರು ಗುಜರಾತ್‌ನಲ್ಲಿ ಈ ವರ್ಷ ಏಪ್ರಿಲ್‌ನಲ್ಲಿ ನಡೆದ ಬೃಹತ್ ಕಾರ್ಯಾಚರಣೆಯ ಉದಾಹರಣೆ ನೀಡಿದರು. ಅಲ್ಲಿ 1,000ಕ್ಕೂ ಹೆಚ್ಚು ಬಾಂಗ್ಲಾದೇಶಿ ನುಸುಳುಕೋರರನ್ನು ಹಿಡಿದು, ಹೊರ ಕಳಿಸಲಾಗಿದೆ. ನಕಲಿ ದಾಖಲೆಗಳ ಆಧಾರದಲ್ಲಿ ದೇಶದಲ್ಲಿ ನೆಲೆಸಲು ಸಹಾಯ ಮಾಡಿದವರ ವಿರುದ್ಧವೂ ತನಿಖೆ ನಡೆಯುತ್ತಿದೆ.
ಸೋಲದೇವನಹಳ್ಳಿಯಲ್ಲಿ ನಡೆದ ಹಲ್ಲೆ ಕುರಿತು ಅವರು ಹೇಳಿದರು, “ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಸಂಪೂರ್ಣ ಮಾಹಿತಿ ಪಡೆದ ನಂತರ ಮಾಧ್ಯಮಗಳಿಗೆ ವಿವರ ನೀಡುತ್ತೇನೆ. ರೇಣುಕಾಸ್ವಾಮಿ ಪ್ರಕರಣದಿಂದ ಯುವಕರು ಪ್ರೇರಿತರಾಗಿದ್ದಾರಾ ಎಂಬುದನ್ನು ತಜ್ಞರು ಅಧ್ಯಯನ ಮಾಡಬೇಕು” ಎಂದು ಹೇಳಿದರು.
“ಡಿಕೆ ಶಿವಕುಮಾರ್ ಅವರಿಗೆ ಅವಕಾಶ ಕೊಡಬೇಕು ಎಂಬ ಶ್ರೀ ರಂಭಾಪುರಿ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಅದರಲ್ಲಿ ತಪ್ಪೇನಿದೆ?” ಎಂದು ಸಚಿವರು ಪ್ರಶ್ನಿಸಿದರು.