
Delhi: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿರುವ ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ (Sunita Williams) ಭೂಮಿಗೆ ಮರಳುವ ನಿರೀಕ್ಷೆಯಲ್ಲಿದ್ದು, ಇಡೀ ಜಗತ್ತಿನ ಗಮನ ಸೆಳೆದಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸುನಿತಾಗೆ ಭಾವುಕ ಪತ್ರವನ್ನು ಕಳುಹಿಸಿದ್ದಾರೆ.
ಪ್ರಧಾನಿ ಮೋದಿಯವರು, “ನೀವು ಸಾವಿರಾರು ಮೈಲುಗಳಷ್ಟು ದೂರವಿದ್ದರೂ ಸದಾ ನಮ್ಮ ಹೃದಯಕ್ಕೆ ಹತ್ತಿರವಾಗಿರುತ್ತೀರಿ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರವನ್ನು ಗಗನಯಾತ್ರಿ ಮೈಕ್ ಮಾಸ್ಸಿಮಿನೊ ಅವರ ಮೂಲಕ ಸುನಿತಾಗೆ ತಲುಪಿಸಲಾಗಿದೆ.
ಈ ಪತ್ರವು 143 ಕೋಟಿ ಭಾರತೀಯರ ಹೆಮ್ಮೆ ಮತ್ತು ಆಶಯಗಳ ಪ್ರತಿಬಿಂಬ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ಮೋದಿಯವರು ಮಾಸ್ಸಿಮಿನೊ ಅವರನ್ನು ಭೇಟಿಯಾಗಿ, ಸುನಿತಾಗೆ ಪತ್ರವನ್ನು ತಲುಪಿಸಲು ಮನವಿ ಮಾಡಿದ್ದರು.
ಸುನಿತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಭೂಮಿಗೆ ಇಂದೇ ಮರಳುವ ಸಾಧ್ಯತೆ ಇದೆ. ನಾಸಾ ನೀಡಿದ ಮಾಹಿತಿಯಂತೆ, ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಸ್ಪೇಸ್ಎಕ್ಸ್ ಡ್ರ್ಯಾಗನ್ ಕ್ರಾಫ್ಟ್ ನೌಕೆ ಫ್ಲೋರಿಡಾ ಕರಾವಳಿಯಲ್ಲಿ ಇಳಿಯುವ ನಿರೀಕ್ಷೆ ಇದೆ. ಮೊದಲು ಬುಧವಾರ ಮರಳುವ ನಿರೀಕ್ಷೆ ಇದ್ದರೂ, ಅದು ಮಂಗಳವಾರಕ್ಕೆ ಮುಂಚಿತಗೊಂಡಿದೆ.
ಕಳೆದ 9 ತಿಂಗಳುಗಳಿಂದ ಬಾಹ್ಯಾಕಾಶದಲ್ಲಿ ಇದ್ದ ಇವರಿಗೆ ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಸವಾಲಾಗಬಹುದು. ಸುನಿತಾ ಮತ್ತು ವಿಲ್ಮೋರ್ ದೈಹಿಕ ತೊಂದರೆ ಅನುಭವಿಸುವ ಸಾಧ್ಯತೆ ಇದೆ ಎಂದು ನಾಸಾ ತಿಳಿಸಿದೆ. ಭಾನುವಾರ ಡ್ರ್ಯಾಗನ್ ಕ್ರಾಫ್ಟ್ ಬಾಹ್ಯಾಕಾಶ ನೌಕೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ.ಭಾರತದ ಶ್ರೇಷ್ಠ ಮಗಳ ಯಶಸ್ವಿ ಮರಳುವಿಕೆಗೆ ಪ್ರಧಾನಿಯವರು ಶುಭ ಹಾರೈಸಿದ್ದಾರೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ಪತ್ರದ ಬಗ್ಗೆ ಎಕ್ಸ್ ನಲ್ಲಿ (ಹಳೆಯ ಟ್ವಿಟ್ಟರ್) ಹಂಚಿಕೊಂಡಿದ್ದಾರೆ.