Bengaluru: ಪ್ರೊ ಕಬಡ್ಡಿ ಲೀಗ್ ಸೀಸನ್-11 (Pro Kabaddi League PKL Season 11) ರಲ್ಲಿ ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಬೆಂಗಳೂರು ಬುಲ್ಸ್ (Bengaluru Bulls) ತಂಡವು ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಅದು ಕೂಡ ಬಲಿಷ್ಠ ದಬಾಂಗ್ ಡೆಲ್ಲಿ (Dabang Delhi) ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಎಂಬುದು ವಿಶೇಷ.
ಹೈದಬಾರಾಬಾದ್ನ (Hyderabad) GMCB ಒಳಾಂಗಣ ಸ್ಟೇಡಿಯಂ ನಡೆದ ಪ್ರೊ ಕಬಡ್ಡಿ ಲೀಗ್ನ 24ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ತಂಡಗಳು ಮುಖಾಮುಖಿಯಾಗಿದ್ದವು. ಆರಂಭದಿಂದಲೇ ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲಾರ್ಧದಲ್ಲಿ ದಬಾಂಗ್ ಡೆಲ್ಲಿ ಆಟಗಾರರು ಪಾರುಪತ್ಯ ಮೆರೆದಿದ್ದರು.
ಆದರೆ ದ್ವಿತೀಯಾರ್ಧದಲ್ಲಿ ಕಂಬ್ಯಾಕ್ ಮಾಡಿದ ಬೆಂಗಳೂರು ಬುಲ್ಸ್ ಪರ ಜೈ ಭಗವಾನ್ ಅದ್ಭುತ ಪ್ರದರ್ಶನ ನೀಡಿದರು. ಮತ್ತೊಂದೆಡೆ ನಿತಿನ್ ರಾವಲ್ ಕೂಡ ಉತ್ತಮ ಸಾಥ್ ನೀಡಿದರು. ಈ ಮೂಲಕ ಸೆಕೆಂಡ್ ಹಾಫ್ನಲ್ಲಿ ಬೆಂಗಳೂರು ಬುಲ್ಸ್ ಒಟ್ಟು 20 ಅಂಕಗಳನ್ನು ಕಲೆಹಾಕಿತು. ಅತ್ತ ದಬಾಂಗ್ ಡೆಲ್ಲಿ ದ್ವಿತೀಯಾರ್ಧದಲ್ಲಿ ಕೇವಲ 11 ಅಂಕಗಳನ್ನು ಮಾತ್ರ ಗಳಿಸಿದ್ದರು.
ಈ ಅದ್ಭುತ ಪ್ರದರ್ಶನದೊಂದಿಗೆ ಬೆಂಗಳೂರು ಬುಲ್ಸ್ ತಂಡವು 34-33 ಅಂಕಗಳ ಅಂತರದಿಂದ ದಬಾಂಗ್ ಡೆಲ್ಲಿ ತಂಡವನ್ನು ಮಣಿಸಿ ರೋಚಕ ಜಯ ಸಾಧಿಸಿತು. ಇಲ್ಲಿ ಬೆಂಗಳೂರು ಬುಲ್ಸ್ 22 ರೈಡ್ ಪಾಯಿಂಟ್ಸ್ ಕಲೆಹಾಕಿದರೆ, 8 ಟ್ಯಾಕಲ್ ಪಾಯಿಂಟ್ಸ್ ಗಳಿಸಿದ್ದರು. ಅಲ್ಲದೆ 2 ಬಾರಿ ದಬಾಂಗ್ ಡೆಲ್ಲಿ ತಂಡವನ್ನು ಆಲೌಟ್ ಮಾಡಿದ್ದರು. ಈ ಭರ್ಜರಿ ಪ್ರದರ್ಶನದೊಂದಿಗೆ ಪಿಕೆಎಲ್ ಸೀಸನ್-11 ರಲ್ಲಿ ಬೆಂಗಳೂರು ಬುಲ್ಸ್ ಗೆಲುವಿನ ಖಾತೆ ತೆರೆದಿದೆ.