ಆಸ್ಟ್ರೇಲಿಯಾ ಕ್ರಿಕೆಟ್ ತಂಡ (Australian cricket team) ಈಗ ಶ್ರೀಲಂಕಾ ಪ್ರವಾಸದಲ್ಲಿದೆ. ಈ ಸಂದರ್ಭ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಎರಡು ದಶಕಗಳ ಬಳಿಕ ಶ್ರೀಲಂಕಾ ನೆಲದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಈ ಸರಣಿಯಲ್ಲಿ ಸ್ಟೀವನ್ ಸ್ಮಿತ್ ನಾಯಕತ್ವ ವಹಿಸಿದ್ದರು.
ಎಡಗೈ ಸ್ಪಿನ್ ಬೌಲರ್ ಮ್ಯಾಥ್ಯೂ ಕುಹ್ನೆಮನ್ ಈ ಸರಣಿಯಲ್ಲಿ ಮಹತ್ವದ ಪಾತ್ರ ವಹಿಸಿ 2 ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸಿದ್ದರು. ಒಂದು ಪಂದ್ಯದಲ್ಲಿ ಐದು ವಿಕೆಟ್ ಪಡೆದು ಚಮಕಿಸಿದ್ದರು. ಆದರೆ ಅವರ ಬೌಲಿಂಗ್ ಶೈಲಿ ಅನುಮಾನಾಸ್ಪದವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಕಾರಣದಿಂದ ಅವರು ಮುಂದಿನ ಮೂರು ವಾರಗಳಲ್ಲಿ ಐಸಿಸಿ ಮಾನ್ಯತೆ ಪಡೆದ ಪರೀಕ್ಷಾ ಕೇಂದ್ರದಲ್ಲಿ ತನ್ನ ಬೌಲಿಂಗ್ ಶೈಲಿಯನ್ನು ಪರಿಶೀಲಿಸಿಕೊಳ್ಳಬೇಕಾಗಿದೆ. ವೃತ್ತಿ ಜೀವನ ಆರಂಭಿಸಿದ ನಂತರ ಇದೇ ಮೊದಲ ಬಾರಿ ಅವರ ಬೌಲಿಂಗ್ ಆಕ್ಷನ್ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಐಸಿಸಿ ನಿಯಮದ ಪ್ರಕಾರ, ಬೌಲರ್ 15 ಡಿಗ್ರಿಗಳ ಮಟ್ಟಿಗೆ ಮೊಣಕೈ ಬಗ್ಗಿಸಿ ಬೌಲಿಂಗ್ ಮಾಡಬಹುದು. ಈ ಮಿತಿ ಮೀರಾದಲ್ಲಿ ಪರೀಕ್ಷೆಗೆ ಒಳಪಡಬೇಕು. ಮ್ಯಾಥ್ಯೂ ಕುಹ್ನೆಮನ್ ಬ್ರಿಸ್ಬೇನ್ ನಲ್ಲಿ ಶೀಘ್ರದಲ್ಲೇ ಪರೀಕ್ಷೆಗೆ ಒಳಗಾಗಲಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಕುಹ್ನೆಮನ್ ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ದು, ಅವರ ಬೌಲಿಂಗ್ ಶೈಲಿಯ ಬಗ್ಗೆ ಈತನಕ ಯಾವುದೇ ಅನುಮಾನ ಇರಲಿಲ್ಲ ಎಂದು ಹೇಳಿದೆ.
2017ರಿಂದ ವೃತ್ತಿ ಕ್ರಿಕೆಟ್ ಆಡುವ ಕುಹ್ನೆಮನ್ ಈವರೆಗೆ 124 ಪಂದ್ಯಗಳಲ್ಲಿ ಆಡಿದ್ದಾರೆ. ಆದರೆ ಮೊದಲ ಬಾರಿಗೆ ಅವರ ಬೌಲಿಂಗ್ ಶೈಲಿ ಪ್ರಶ್ನೆಗೊಳ್ಳುತ್ತಿದೆ. ಪರೀಕ್ಷೆಯಲ್ಲಿ ವಿಫಲವಾದರೆ ಅವರಿಗೆ ನಿಷೇಧದ ಸಾಧ್ಯತೆ ಇದೆ. ಇದೀಗ ಅವರ ಭವಿಷ್ಯ ಈ ಪರೀಕ್ಷೆಯ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.