Ramanagara : ಅಕ್ಷರ ದಾಸೋಹ ಬಿಸಿಯೂಟ ತಯಾರಕರ (Akshara Dasoha Midday Meals) ಫೆಡರೇಷನ್ ನೇತೃತ್ವದಲ್ಲಿ ಶನಿವಾರ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಬಿಸಿಯೂಟ ತಯಾರಕರಿಗೆ ಸೇವಾ ಭದ್ರತೆ ನೀಡಿ, ವೇತನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಳೆದ 19 ವರ್ಷದಿಂದ ಬಿಸಿಯೂಟ ತಯಾಕರು ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ನಮಗೆ ಇನ್ನೂ ಸೇವೆ ಭದ್ರತೆ ಎಂಬುದೇ ಇಲ್ಲದಾಗಿದೆ. ದಿನದಲ್ಲಿ ಆರು ಗಂಟೆಗಳ ಸೇವೆ ಸಲ್ಲಿಸುತ್ತಿರುವ ಮುಖ್ಯ ಆಡುಗೆ ತಯಾರಕರಿಗೆ ತಿಂಗಳಿಗೆ ಕೇವಲ ₹2700 ಹಾಗೂ ಸಹಾಯಕ ಸೇವಕರಿಗೆ ₹2600 ಮಾತ್ರ ದೊರೆಯುತ್ತಿದೆ. ಈ ಸಂಬಳದಿಂದ ಜೀವನ ನಡೆಸಲು ಸಾಧ್ಯವೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಬಿಸಿಯೂಟ ತಯಾರಕರಿಗೆ ಸೇವೆಯನ್ನು ಕಾಯಂ ಮಾಡಿ ರಾಜ್ಯ ಸರ್ಕಾರ 2021-22ನೇ ಸಾಲಿನ ಬಜೆಟ್‍ನಲ್ಲಿ ನಿಗದಿಪಡಿಸಿರುವ ಕನಿಷ್ಠ ವೇತನ ಜಾರಿಗೊಳಿಸಿ ಕನಿಷ್ಠ ₹21 ಸಾವಿರ ವೇತನ ನೀಡಬೇಕು. 60 ವರ್ಷ ಮೀರಿ ನಿವೃತ್ತಿ ಆಗುವವರಿಗೆ ₹2 ಲಕ್ಷ pf ನೀಡಿ ಮಾಸಿಕ ನಿವೃತ್ತಿ ಪಿಂಚಣಿಯಾಗಿ ₹3 ಸಾವಿರ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಫೆಡರೇಷನ್‌ನ ಜಿಲ್ಲಾ ಅಧ್ಯಕ್ಷೆ ನಿರ್ಮಲಾ, ಕಾರ್ಯದರ್ಶಿ ರೋಸ್ ಮೇರಿ, ಎಸ್‌ಡಿಎಂಸಿ ಸಂಘಟನೆ ರಾಜ್ಯ ಉಪಾಧ್ಯಕ್ಷ ಶಂಭುಗೌಡ, ಪದಾಧಿಕಾರಿಗಳಾದ ಅನುಸೂಯಮ್ಮ, ಮಂಗಳಾ ಮತ್ತಿತರರು ಉಪಸ್ಥಿತರಿದ್ದರು.