Ramanagara : ರಾಮನಗರ ಜಿಲ್ಲೆಯಲ್ಲಿ 75 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ Silk Cocoon Market ನಿರ್ಮಾಣಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ Twitter ಮೂಲಕ ತಿಳಿಸಿದ್ದಾರೆ.
ರಾಮನಗರ-ಚನ್ನಪಟ್ಟಣ ಅವಳಿ ನಗರದ ಮಾರುಕಟ್ಟೆಗಳನ್ನು ಒಗ್ಗೂಡಿಸಿ ಚನ್ನಪಟ್ಟಣದಲ್ಲಿ ಹೊಸ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಿದ್ದು ಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ 20 ಎಕರೆ ಜಾಗವನ್ನು ಇದಕ್ಕಾಗಿ ಗುರುತಿಸಲಾಗಿದೆ. ಈ ಯೋಜನೆಗೆ ನಬಾರ್ಡ್ ಆರ್ಥಿಕ ನೆರವು ನೀಡುತ್ತಿದೆ.
ರೈತರು ರಾಜ್ಯದ ಹಲವು ಜಿಲ್ಲೆಗಳಿಂದ ರೇಷ್ಮೆಗೂಡನ್ನು ರಾಮನಗರ ರೇಷ್ಮೆ ಮಾರುಕಟ್ಟೆಗೆ ತೆಗೆದುಕೊಂಡು ಬರುತ್ತಾರೆ. ಆದರೆ ಸದ್ಯ ರಾಮನಗರದಲ್ಲಿ ಇರುವ ಮಾರುಕಟ್ಟೆಯಲ್ಲಿ ಹೆಚ್ಚು ಅವ್ಯವಸ್ಥೆಯಿರುವುದರಿಂದ ರಾಮನಗರ ಬದಲಿಗೆ ಚನ್ನಪಟ್ಟಣದಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಹೊಸ ಮಾರುಕಟ್ಟೆ ತಲೆ ಎತ್ತಲಿದೆ. ಟೆಂಡರ್ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಮೂರು ತಿಂಗಳೊಳಗೆ ಮಾರುಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.