Patna: ಬಿಹಾರದ ರೋಹ್ತಾಸ್ ಜಿಲ್ಲೆಯ ನಿವಾಸಿ ರಂಜು ದೇವಿ ತಮ್ಮ ಹೆಸರು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ರಾಹುಲ್ ಗಾಂಧಿಗೆ (Rahul Gandhi) ದೂರು ನೀಡಿದ್ದರು. ಆದರೆ ತನಿಖೆಯಲ್ಲಿ ಅವರ ಹೆಸರು ಮತ್ತು ಕುಟುಂಬದವರ ಹೆಸರು ಮತದಾರರ ಪಟ್ಟಿಯಲ್ಲೇ ಇದೆ ಎಂದು ಪತ್ತೆಯಾಗಿದೆ.
ರಂಜು ದೇವಿಯ ಹೇಳಿಕೆಯ ಪ್ರಕಾರ, ತಮ್ಮ ವಾರ್ಡ್ ಕಾರ್ಯದರ್ಶಿ “ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ” ಎಂದು ಹೇಳಿದ ಕಾರಣ, ಅವರು ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆ. ನಂತರ ಸ್ವತಃ ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ ತಮ್ಮ ಹೆಸರು ಇದ್ದೇ ಇದೆ ಎಂದು ದೃಢಪಟ್ಟಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದರಿಂದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ–ಪ್ರತ್ಯಾರೋಪಗಳು ನಡೆಯುತ್ತವೆ. ವಿರೋಧ ಪಕ್ಷಗಳು ಇದನ್ನು ‘ಮತ ಕಳ್ಳತನ’ ಎಂದು ಕರೆಯುತ್ತವೆ. ಆದರೆ ಸತ್ಯ ಹೊರಬಂದ ನಂತರ ವಿರೋಧ ಪಕ್ಷದ ಆರೋಪಗಳಿಗೆ ಹೊಡೆತ ಬಿದ್ದಿದೆ.
ಇತ್ತೀಚೆಗೆ ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ರಾಜಕೀಯ ಚರ್ಚೆ ಹೆಚ್ಚಾಗಿದೆ. NDA ಸರ್ಕಾರ ಮತದಾರರ ಹಕ್ಕು ಕಸಿಯಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಕಾಂಗ್ರೆಸ್ ಮತ್ತು ಆರ್ಜೆಡಿಯಿಂದ ಕೇಳಿಬಂದಿತ್ತು. ಆದರೆ ರಂಜು ದೇವಿಯ ಪ್ರಕರಣದಿಂದ ಆ ಆರೋಪದ ವಿಶ್ವಾಸಾರ್ಹತೆ ಕುಂದಿದೆ.