ಬ್ಯಾಂಕಿಂಗ್ ಸಂಸ್ಥೆಗಳು ಮತ್ತು ಇತರೆ ಪಾಲುದಾರರ ವಿನಂತಿಗಳನ್ನು ಪರಿಗಣಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India – RBI) ಗುರುವಾರ ಕಾರ್ಡ್ (Credit Card / Debit Card) ಅಂತರ್ಜಾಲದಲ್ಲಿ (e-Commerce Online Payment) ಬಳಸಲು ಅನುಸರಿಸಬೇಕಾದ ಹೊಸ ‘ಟೋಕನೈಸೇಶನ್’ (Tokenisation) ನಿಯಮದ ಗಡುವನ್ನು ಇನ್ನೂ ಆರು ತಿಂಗಳವರೆಗೆ ಎಂದರೆ ಜೂನ್ 2022 ರವರೆಗೆ ವಿಸ್ತರಿಸಿದೆ.
ಸೆಪ್ಟೆಂಬರ್ 2021 ರಲ್ಲಿ RBI, ಜನವರಿ 01, 2022 ರಿಂದ ಜಾರಿಗೆ ಬರುವಂತೆ ಅಂತರ್ಜಾಲ ವ್ಯಾಪಾರಿಗಳು ತಮ್ಮ ಸರ್ವರ್‌ಗಳಲ್ಲಿ ಗ್ರಾಹಕರ ಕಾರ್ಡ್ ವಿವರಗಳನ್ನು ಸಂಗ್ರಹಿಸುವುದನ್ನು ನಿಷೇಧಿಸಿ, ಕಾರ್ಡ್ ವಿವರ ಸಂಗ್ರಹಣೆಗೆ ಪರ್ಯಾಯವಾಗಿ ಕಾರ್ಡ್-ಆನ್-ಫೈಲ್ (CoF) ಟೋಕನೈಸೇಶನ್ ಅನ್ನು ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿತ್ತು.
ಟೋಕನೈಸೇಶನ್ ಪದ್ದತಿಯಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿವರಗಳನ್ನು “ಟೋಕನ್” ಎಂದು ಕರೆಯಲಾಗುವ ಪರ್ಯಾಯ ಕೋಡ್‌ನೊಂದಿಗೆ ಬದಲಾಯಿಸಬೇಕಾಗುತ್ತದೆ. ಈ ಮೂಲಕ ವಹಿವಾಟಿನ ಪ್ರಕ್ರಿಯೆಯಲ್ಲಿ ವ್ಯಾಪಾರಿಯೊಂದಿಗೆ ನಿಜವಾದ ಕಾರ್ಡ್ ವಿವರಗಳನ್ನು ಹಂಚಿಕೊಳ್ಳದೆ ಟೋಕನ್ ಕೋಡ್ ಮಾತ್ರ ಹಂಚಿಕೊಳ್ಳುವ ಕಾರಣ ಟೋಕನೈಸ್ ಮಾಡಿದ ಕಾರ್ಡ್ ವಹಿವಾಟನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.
ಟೋಕನೈಸೇಶನ್ ಪದ್ದತಿಯನ್ನು ಮೊದಲು ಜನವರಿ 01, 2022 ರಿಂದ ಪರಿಚಯಿಸಲು ಸೂಚಿಸಿದ್ದ RBI ಈಗ ಆರು ತಿಂಗಳವರೆಗೆ ಮುಂದೂಡಿದೆ.